Monday, November 9, 2009

ಶಾಂತಾರಾಂ ಮತ್ತು ಅಲಾರಾಂ

ಶಾಂತಾರಾಮನಿಗೆ ಇತ್ತಿತ್ತಲಾಗಿ ಒಂದು ಕಿವಿ ಕೇಳಿಸುತ್ತಿಲ್ಲ.

ಬೆಳಗಿನ ಜಾವ ಐದು ಘಂಟೆಗೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಯಾವತ್ತೂ ಅಷ್ಟು ಬೇಗ ಎದ್ದಿರದ ಶಾಂತಾರಾಮನಿಗೆ ತಾನು ಯಾರು ಎನ್ನುವುದು ಗೊತ್ತಾಗಲು ಐದು ಸೆಕೆಂಡೂ, ತಾನೆಲ್ಲಿದ್ದೇನೆ ಎಂದು ಗೊತ್ತಾಗಲು ಮತ್ತೈದು ಸೆಕೆಂಡೂ, ಈಗ ಕಿರುಚುತ್ತಿರುವುದು ಅಲಾರಾಂ ಎಂದು ಗೊತ್ತಾಗಲು ಇನ್ನೆರಡು ಸೆಕೆಂಡೂ ಹಿಡಿಯಿತು. ಮತ್ತೆರಡು ಸೆಕೆಂಡುಗಳಲ್ಲಿ ಅಲಾರಾಮಿನ ಬಾಯಿ ಮುಚ್ಚಿಸದಿದ್ದರೆ ಪಕ್ಕದ ರೂಮಿನಲ್ಲಿ ರಾತ್ರಿ ಲೇಟಾಗಿ ಮಲಗಿರುವ ರತ್ನಮಾಲ ಎದ್ದು ಬಂದು ಕೆಂಡ ಕಾರುತ್ತಾಳೆಂಬ ಎಚ್ಚರ ಆ ನಿದ್ದೆಗಣ್ಣಿನಲ್ಲೂ ಶಾಂತಾರಾಮನಿಗೆ ಉಂಟಾಯಿತು. ರತ್ನಮಾಲಾ ಅವನ ಹೆಂಡತಿ. ಶಾಂತಾರಾಮನ ಗೊರಕೆಯಿಂದಾಗಿ ರತ್ನಮಾಲಾಳೂ, ರತ್ನಮಾಲಾಳ ಬೈಗುಳದಿಂದಾಗಿ ಶಾಂತಾರಾಮನೂ ಬೇರೆ ಬೇರೆ ರೂಮಿನಲ್ಲಿ ಮಲಗುತ್ತಾರೆ. ಶಾಂತಾರಾಮ ಮಲಗಿದಲ್ಲಿಂದಲೇ ಅಲಾರಾಮಿನ ತಲೆಯ ಮೇಲೆ ಬಡಿದ. ಅಲಾರಾಂ ಬಾಯಿ ಮುಚ್ಚಲಿಲ್ಲ!

ತಾನು ಅಲಾರಾಂ ಇಟ್ಟಿದ್ದು ಯಾಕೆ ಎಂದು ಜ್ಞಾಪಿಸಿಕೊಳ್ಳಲು ಯತ್ನಿಸಿದ ಶಾಂತಾರಮನಿಗೆ ಇದು ಇಲೆಕ್ಟ್ರಾನಿಕ್ ಅಲಾರಾಂ ಎಂದೂ, ಅದರ ಸ್ವಿಚ್ಚು ಇರುವುದು ಪಕ್ಕದಲ್ಲೆಂದೂ, ಅದನ್ನು ಸರಿಸಿದರೆ ಮಾತ್ರ ಅದು ಬಾಯಿ ಮುಚ್ಚುತ್ತದೆಂಬುದೂ ನೆನಪಾಯಿತು. ಕತ್ತಲೆಯಲ್ಲೇ ಆ ಸ್ವಿಚ್ಚನ್ನು ಹುಡುಕಿ ಸರಿಸಿದ್ದಾಯಿತು.

ಆದರೂ ಅಲಾರಾಂ ಬಾಯಿ ಮುಚ್ಚುತ್ತಿಲ್ಲ!

ರತ್ನಮಾಲಾಳ ಬೈಗುಳ ತಿನ್ನುವ ಆತಂಕದಿಂದ ಶಾಂತಾರಾಮನಿಗೆ ಮತ್ತೂ ಅವಸರವಾಗಿ ಗಾಬರಿಯಾಗತೊಡಗಿತು. ಇನ್ನು ಸ್ವಲ್ಪ ಹೊತ್ತು ಇದು ಮುಂದುವರಿದರೆ ರತ್ನಮಾಲಾ ಎದ್ದು ಬರುತ್ತಾಳೆ, "ಕೆಪ್ಪ ಮುಂಡೇದು, ಅಲಾರಾಮಿನ ಕೂಗಾಟದ ಮಧ್ಯೆಯೇ ಹೇಗೆ ಮಲಗಿ ನಿದ್ದೆ ಹೊಡೆಯುತ್ತಿದೆ ನೋಡು. ಇದನ್ನು ಎಬ್ಬಿಸಲಿಕ್ಕಾ, ಅರವತ್ತು ರೂಪಾಯಿ ಖರ್ಚು ಮಾಡಿ ಅಲಾರಾಂ ತಂದಿದ್ದು?" ಎಂದು ಉಗಿಯುತ್ತಾಳೆ. ಅಂಥ ಗಾಬರಿಯಲ್ಲೂ ಶಾಂತಾರಾಮನಿಗೆ ನೆನಪಾದದ್ದು ಅಲಾರಾಮಿನ ಸೆಲ್ಲು. ತಕ್ಷಣವೇ ಸೆಲ್ಲು ಹಾಕುವ ಜಾಗವನ್ನು ಹುಡುಕಿ ಅದರಲ್ಲಿದ್ದ ಒಂದು ಸೆಲ್ಲನ್ನು ತೆಗೆಯಲು ಯತ್ನಿಸಿದ. ಅಲಾರಾಮಿನಲ್ಲಿ ಸೆಲ್ಲೇ ಇಲ್ಲ!

ಅಲಾರಾಂ ಗದ್ದಲ ಮಾತ್ರ ನಿಲ್ಲುತ್ತಿಲ್ಲ!

ಗಾಬರಿಯಿಂದ ಶಾಂತಾರಾಮನಿಗೆ ಮೈ ಬೆವರತೊಡಗಿತು. ಇದೆಂಥ ಭೂತಚೇಷ್ಟೆ! ಸೆಲ್ಲೂ ಇಲ್ಲದೇ ಅಲಾರಾಂ ಅರಚುತ್ತಿರುವುದು ಹೇಗೆ? ತಕ್ಷಣ ಏನೋ ಹೊಳೆದಂತಾಗಿ ಪಕ್ಕನೆ ಅಲಾರಾಮನ್ನು ಹಿಡಿದು ದಿಂಬಿನ ಅಡಿಯಲ್ಲಿಟ್ಟು ಅದುಮಿದ. ಕನಿಷ್ಟ ಅದರ ಶಬ್ದವನ್ನಾದರೂ ತಡೆಹಿಡಿಯುವುದು ಅವನ ಉದ್ದೇಶ!

ಕರ್ಕಶ ಶಬ್ದ ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ!

ಏನು ಮಾಡಿದರೂ ಬಾಯಿ ಮುಚ್ಚದ ಅಲಾರಾಂ ರತ್ನಮಾಲಾಳ ಇನ್ನೊಂದು ಅವತಾರವೇ ಅನ್ನಿಸಿ, ಶಾಂತಾರಾಮ ಬೆಳಗಿನ ಜಾವದಲ್ಲಿ ತತ್ವಜ್ಞಾನಿಯಾಗತೊಡಗಿದ. ರತ್ನಮಾಲಾ ಮತ್ತು ಅಲಾರಾಂ ಇಬ್ಬರೂ ತಾವು ಹೇಳಬೇಕೆಂದುಕೊಂಡಿದ್ದನ್ನು ಮುಗಿಸುವವರೆಗೂ ಬಾಯಿ ಮುಚ್ಚುವುದಿಲ್ಲ. ಸ್ವಲ್ಪ ಹೊತ್ತು ಏನೂ ತೋಚದೇ ಶಾಂತಾರಾಮ ಕತ್ತಲೆಯಲ್ಲಿ ಒಬ್ಬನೇ ಕೈಚೆಲ್ಲಿ ಕುಳಿತ. ಇಂಥ ಹತಾಶೆಯ ಮಧ್ಯೆಯೇ ಶಾಂತಾರಾಮನಿಗೆ ಇನ್ನೊಂದು ವಿಷಯ ಹೊಳೆಯಿತು! ತಾನು ಕಾಣುತ್ತಿರುವುದು ಬರೀ ಕನಸಾಗಿರಲಿಕ್ಕೂ ಸಾಕು! ಅಲಾರಾಮನ್ನು ಇಟ್ಟು ಐದು ಘಂಟೆಗೇ ಎದ್ದು ತಂದೆಯನ್ನು ಕರೆತರಲು ಸ್ಟೇಷನ್ನಿಗೆ ಹೋಗಬೇಕೆಂಬ ಆತಂಕದಲ್ಲಿ ಇಂಥ ಸ್ವಪ್ನ ಬಿದ್ದಿದೆ. ಹಿಂದಿನ ದಿನವಷ್ಟೇ ತನಗೆ ಎಚ್ಚರವಾದಂತೆಯೂ, ಎದ್ದು ಮೂತ್ರ ವಿಸರ್ಜನೆಗೆ ಹೋದಂತೆಯೂ ಅನ್ನಿಸಿ ಹಾಸಿಗೆ ಒದ್ದೆಯಾಗಿತ್ತಲ್ಲ, ಇದೂ ಅದೇ!

ಅಷ್ಟು ಯೋಚನೆ ಬರುತ್ತಿದ್ದಂತೆಯೇ ಶಾಂತಾರಾಮ ಇನ್ನೂ ಕರ್ಕಶವಾಗಿಯೇ ಅರಚುತ್ತಿದ್ದ ಅಲಾರಾಮನ್ನು ನಿರ್ಲಕ್ಷಿಸಿ ಚಾದರ ಹೊದ್ದು ಮಲಗಿದ.

ಸ್ವಲ್ಪ ಹೊತ್ತಿನಲ್ಲೇ ವಾಚಾಮಗೋಚರವಾಗಿ ಬಯ್ಯುತ್ತ ಪಕ್ಕದ ರೂಮಿನಿಂದ ರತ್ನಮಾಲಾ ಎದ್ದು ಬಂದಳು. ಅಂಥ ಸುಂದರಿಯ ಬಾಯಲ್ಲಿ ಅಷ್ಟು ಬೈಗುಳ ಬರುತ್ತದೆಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಹಗಲಿನಲ್ಲಿ ನೀಟಾಗಿ ಕಾಣುವ ಅವಳು ರಾತ್ರಿಯಾಗುತ್ತಿದ್ದಂತೆ ನೈಟಿಯಲ್ಲಿ ತೂರಿ ನಿದ್ದೆಯಲ್ಲಿ ತಲೆಗೂದಲೆಲ್ಲ ಎದ್ದು ನಿಂತು ಮುಖವೆಲ್ಲ ಎಣ್ಣೆ ಎಣ್ಣೆಯಾಗಿ ರಣಭಯಂಕರವಾಗಿ ಕಾಣಿಸುತ್ತಾಳೆ. ಬಯ್ಯುತ್ತಲೇ ಶಾಂತಾರಾಮನ ರೂಮಿನಲ್ಲಿದ್ದ ಇನ್ನೊಂದು ಅಲಾರಾಮಿನ ತಲೆಯ ಮೇಲಿರುವ ಸ್ವಿಚ್ಚನ್ನು ಅದುಮಿದಳು. ಅಲಾರಾಂ ಸುಮ್ಮನಾಯಿತು. ಆ ನೀರವತೆಯಲ್ಲಿ ರತ್ನಮಾಲಾಳ ಬೈಗುಳ ಇನ್ನೂ ಸ್ಪಷ್ಟವಾಗಿ ಶಾಂತಾರಾಮನಿಗೆ ಕೇಳಿಸಿತು, "ಕೆಪ್ಪ ಮುಂಡೇದು, ಅಲಾರಾಮಿನ ಕೂಗಾಟದ ಮಧ್ಯೆಯೇ ಹೇಗೆ ಮಲಗಿ ನಿದ್ದೆ ಹೊಡೆಯುತ್ತಿದೆ ನೋಡು. ಇದನ್ನು ಎಬ್ಬಿಸಲಿಕ್ಕಾ, ಅರವತ್ತು ರೂಪಾಯಿ ಖರ್ಚು ಮಾಡಿ ಅಲಾರಾಂ ತಂದಿದ್ದು?" ಆಗಷ್ಟೇ ಜ್ಞಾನೋದಯವಾದಂತೆ ಶಾಂತಾರಾಮನಿಗೆ ತಾನು ಐದು ಘಂಟೆಗೆ ತಯಾರು ಮಾಡಿಟ್ಟಿದ್ದು "ಇನ್ನೊಂದು" ಅಲಾರಾಮಿನಲ್ಲಿ ಎಂಬ ವಿಷಯ ಜ್ಞಾಪಕಕ್ಕೆ ಬಂದು ಎದ್ದು ಕುಳಿತ. ಸುಮ್ಮನಾದ ಅಲಾರಾಂ ಈಗ ತನ್ನದೇ ಇನ್ನೊಂದು ಅವತಾರದಂತೆ ಶಾಂತಾರಾಮನಿಗೆ ಅನಿಸತೊಡಗಿತು. ಇಬ್ಬರೂ ರತ್ನಮಾಲಾಳ ಎದುರಿಗೆ ಬಾಯಿ ತೆರೆಯುವುದಿಲ್ಲ!

ಶಾಂತಾರಾಮನಿಗೆ ಇತ್ತಿತ್ತಲಾಗಿ ಒಂದು ಕಿವಿ ಕೇಳಿಸುತ್ತಿಲ್ಲ. ಅದಕ್ಕೇ ಶಬ್ದ ಎಲ್ಲಿಂದ ಬರುತ್ತಿದೆಯೆಂಬುದು ಅರ್ಥವಾಗುವುದಿಲ್ಲ!

12 comments:

sunaath said...

ಸುಪ್ತವರ್ಣ,
ನಿಜವನ್ನೇ ಹೇಳುತ್ತೀನಿ: ಆಧುನಿಕ ಪರಿಸರದ ವಿನೋದವನ್ನು ಕೆಲವರು ಇಂಗ್ಲಿಶ್ ಲೇಖಕರು ಸೃಷ್ಟಿಸಿದ್ದಾರೆ. ನಿಮ್ಮದೂ ಆ ಮಾದರಿಯ ವಿನೋದವೇ ಆಗಿದೆ. ನನಗೆ ತುಂಬಾ ಮೆಚ್ಚಿಗೆಯಾಯಿತು.

ಸಾಗರದಾಚೆಯ ಇಂಚರ said...

ಸುಪ್ತವರ್ಣ,
ನಿಮ್ಮ ಹಾಸ್ಯ ತುಂಬಾ ಇಷ್ಟವಾಯಿತು

ಚುಕ್ಕಿಚಿತ್ತಾರ said...

ನಿಜವಾಗಲೂ ನಿಮ್ಮ ಹಾಸ್ಯ ಪ್ರಜ್ನೆ ಮೆಚ್ಚುವ೦ತದ್ದೇ.....

ಒಬ್ಬಳೇ ನಗುತ್ತಿದ್ದೇನೆ....

ಈ ರೀತಿಯ ಬರಹಗಳು ಬರುತ್ತಿರಲಿ.....

ವ೦ದನೆಗಳು.

ಗೌತಮ್ ಹೆಗಡೆ said...

lekhanada sheershike mast:) heege lekhana kooda:)

ಮಾವೆಂಸ said...

ನಿಜಕ್ಕೂ ನಿಮ್ಮ ಆಧುನಿಕ ಕತೆಗಳು ಚೆನ್ನಾಗಿವೆ. ಸದ್ಯ ನಾನು ಓದಿದ್ದು ಅಲಾರಾಂ ಕತೆ ಹಾಗೂ ನೀವು ಪೂನಾಗೆ ಓಡಿಹೋದ ವೃತ್ತಾಂತ! ಬಹುಷಃ ನಿಮ್ಮ ಶೈಲಿ ಜೋಗಿಯವರ ಕತೆಗಳನ್ನು ಹೋಲುವುದರಿಂದಲೋ ಏನೋ ಎಲ್ಲೋ ಓದಿದಂತೆ ಅನಿಸುತ್ತಿದೆಯೇ - ಗೊತ್ತಾಗುತ್ತಿಲ್ಲ. ಆದರೆ ಕತೆಯ ಬೆಳವಣಿಗೆ, ನಿರೂಪಣೆಗೆ ಹ್ಯಾಟ್ಸಾಫ್... ಪತ್ರಿಕೆಗಳಿಗೆ ಬರೆದಿರುವಿರೇ?

Raghu said...

ಹ್ಹ ಹ್ಹ ಹ್ಹ.. ಅಲರಾಂ ಕಥೆ ಚೆನ್ನಾಗಿದೆ.. :) :)
ನಿಮ್ಮವ,
ರಾಘು.

ಸುಪ್ತವರ್ಣ said...

ಸುನಾಥ ಸರ್, ನಿಮ್ಮ ಎಂದಿನ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಗುರುಮೂರ್ತಿ, ವಿಜಯಶ್ರೀ, ಗೌತಮ್, ರಘು ನಿಮಗೆ ಇಷ್ಟವಾದದ್ದು ಖುಷಿಯಾಯಿತು!

ಮಾವೆಂಸ,

ನೀವು ಹೇಳಿದ ಅಭಿಪ್ರಾಯವನ್ನೇ ನನ್ನ ಹತ್ತಿರದವರೂ ಹೇಳಿದ್ದಾರೆ. ಬಹುಶಃ ನಾನು ಇತ್ತೀಚೆಗೆ ಜೋಗಿಯವರ ಬರಹಗಳನ್ನು ಓದಿರುವುದರಿಂದ ಅವರ ಪ್ರಭಾವ ಜಾಸ್ತಿ ಇರುವ ಸಂಭವವಿದೆ. ಏನೇ ಆದರೂ ಇದರಿಂದ ಆದಷ್ಟು ಬೇಗ ಹೊರಬರಲು ಯತ್ನಿಸುತ್ತೇನೆ. ಶೈಲಿಯ ಹೋಲಿಕೆಯಿದ್ದಲ್ಲಿ ಕಥೆಯನ್ನೂ ಕದ್ದಿದ್ದೆಂಬ ಆರೋಪ ಬರುವ ಸಂಭವ ಇರುವುದರಿಂದ ಆದಷ್ಟು ಬೇಗ ಈ ಪ್ರಭಾವದಿಂದ ಹೊರಬರುವುದು ಸೂಕ್ತ. ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ವಂದನೆಗಳು. ನನ್ನ ಸುಧಾರಣೆಗೆ ಸಹಾಯ ಮಾಡುತ್ತಿದ್ದೀರಿ.

ಬಾಲು said...

ಸಪ್ತವರ್ಣ ಅವರೇ,

ನನಗೆ ಯಾರನ್ನೂ ಕೊಲ್ಲಬೇಕು ಎನ್ನುವ ಉದ್ದೇಶ ಇಲ್ಲವಾದ್ದರಿಂದ ನಿಜವನ್ನೇ ಹೇಳುವೆ.
ಕಥೆ ಚೆನ್ನಾಗಿದೆ, ಆದರೆ ಕಥೆಯ ಮೊದಲು ಸಾಲು ಇಲ್ಲವಾಗಿದ್ದಲ್ಲಿ ಕಥೆಗೆ ಲಾಭವೇ ಜಾಸ್ತಿ ಆಗುತ್ತಿತ್ತು ಅಂತ ಅನಿಸಿಕೆ. ನಿರೂಪಣೆ ಚೆನ್ನಾಗಿದೆ, ಜೋಗಿ ಅವರ ಬರವಣಿಗೆಗೆ ಹೋಲುತ್ತದೆ ಅಂತ ನಾನು ಭಾವಿಸುವುದಿಲ್ಲ, ಯಾಕೆಂದರೆ ಅವರ ಬರಹದ ಶೈಲಿ ಬೇರೆಯೇ ಇದೆ. ಇದು ನಿಮ್ಮ ಬೈಕು ಪುರಾಣ ಮತ್ತೆ ಅಲಾರಾಂ ಕಥೆ ಓದಿದ ನಂತರದ ನನ್ನ ಅಭಿಪ್ರಾಯ.

ವಿನೋದ, ಅಸಹಾಯಕತೆ ಮತ್ತೆ ತತ್ವಜ್ಞಾನದ ಒಳ್ಳೆಯ ಮಿಶ್ರಣ.

ಆಪ್ತವಾದ ಬ್ಲಾಗು ಮತ್ತೆ ಬರಹ.

ದಿನಕರ ಮೊಗೇರ.. said...

ಹ ಹ ಹ ....ತುಂಬಾ ಚೆನ್ನಾಗಿದೆ ನಿಮ್ಮ ಶಾಂತಾರಾಮನ ಕಥೆ..... ನಿರೂಪಣೆ ತುಂಬಾ ಚೆನ್ನಾಗಿದೆ.....

ಆನಂದ said...

ಕಥೆ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಇತರೆ ಕಥೆಗಳನ್ನೂ ಓದಿದೆ, ಇಷ್ಟವಾದವು.

ಜಲನಯನ said...

ಸುಪ್ತವರ್ಣರವರೇ, ಇಲ್ಲಿ complex confusion syndrome (ನಾವು ನಮ್ಮ student days ಹೇಳುತ್ತಿದ್ದುದು) ಗೆ ಶಾಂತಾರಾಂ ಬಲಿಯಾಗಿದ್ದ ಅನಿಸುತ್ತೆ...ಭಯ, ಕೆಪ್ಪತನ, ನಿದ್ದೆ ಮಂಪರು ಇತ್ಯಾದಿ......ಹಹಹಹ...ತುಂಬಾ ಚನ್ನಾಗಿದೆ....

ಸೀತಾರಾಮ. ಕೆ. said...

nakkidde nakkiddu
super