Wednesday, November 18, 2009

ಕನ್ನಡ ಮತ್ತು ಎನ್ನಡ

ಕನ್ನಡ ಸಂಘವೊಂದು ಕನ್ನಡ ಮಾತನಾಡದ ರೆಡಿಯೋ ಸ್ಟೇಷನ್ ಮೇಲೆ ದಾಳಿ ಮಾಡಿದ ಸುದ್ದಿ ಪೇಪರಿನಲ್ಲಿತ್ತು. "ಏನು ಮೂರ್ಖತನ ನೋಡು. ಜನ ಬೇಕಾದ್ದು ಕೇಳುತ್ತಾರೆ, ಹೀಗ್ಯಾಕೆ ಇವರು ಕಂಡವರ ಮೇಲೆಲ್ಲ ಹರಿಹಾಯುತ್ತಾರೆ? cheap ರಾಜಕೀಯ", ಇಂಗ್ಲೀಷಿನಲ್ಲಿ ಹೇಳಿದಳು.


"ಇದೇ ಚೆನ್ನೈನಲ್ಲಿ ನಡೆದರೆ ನಿನ್ನ ಅಭಿಪ್ರಾಯ ಹೀಗೇ ಇರುತ್ತಿತ್ತೇ?" ನಾನೂ ಇಂಗ್ಲಿಷ್ ನಲ್ಲಿ ಕೇಳಿದೆ. ನನಗೂ ಅವಳಿಗೂ ಮಧ್ಯದ ಮೊದಲ ಸೇತುವೆ ಇಂಗ್ಲೀಷೇ, ಈಗ ಇಂಗ್ಲಿಷಿನ ಜೊತೆ ಪ್ರೇಮವೂ ಇದೆ!


"ಅಯ್ಯೋ! ಎಲ್ಲಿ ನಡೆದರೂ ಒಂದೇ. ನನಗೇನು ಚೆನ್ನೈ ಮಾವನ ಮನೆಯೇ? ಹಾಗೆ ನೋಡಿದರೆ ಬೆಂಗಳೂರೇ ಮಾವನ ಮನೆ!", ನನ್ನತ್ತ ನೋಡಿ ಕಣ್ಣು ಮಿಟುಕಿಸಿದಳು.


ನನಗೆ ಅವಳ ಜೋಕ್ ಆಸ್ವಾದಿಸುವ ಮೂಡ್ ಇಲ್ಲ."ನಿಮಗೆ ಬೆಂಗಳೂರಿನ ಉದ್ಯೋಗ ಬೇಕು, ಸೌಲಭ್ಯಗಳೆಲ್ಲ ಬೇಕು, ಇಲ್ಲಿನ ಭಾಷೆ ಮಾತ್ರ ಬೇಡವೇ?", ಮಾತು ಮತ್ತೆಲ್ಲೋ ತಿರುಗುತ್ತಿದೆ.


ನಾನು ಕಿರಿಕಿರಿಗೊಂಡಿದ್ದು ನೋಡಿ ಅವಳು ಅವಾಕ್ಕಾದಳು. "ಹಾಗೇಕೆ ಅನ್ನುತ್ತಿ? ಇಲ್ಲಿನ ಭಾಷೆ ಬೇಡವೆಂದು ನಾನ್ಯಾವಾಗ ಅಂದೆ?"


"ಮತ್ಯಾಕೆ ಇನ್ನೂ ಕನ್ನಡ ಕಲಿತಿಲ್ಲ?"

"ಕಲಿಯಬೇಕೆಂದೇ ನನಗೆ ಯಾವಾಗಲೂ ಆಸೆ ಇತ್ತು. ಆದರೆ ಕಲಿಸುವವರು ಯಾರೂ ಸಿಗಲಿಲ್ಲ, ಈಗ ನೀನಿದ್ದೀಯಲ್ಲ?", ನನ್ನನ್ನು ನೋಡಿ ನಗುತ್ತ ಕೇಳಿದಳು.

"ಇದೆಲ್ಲ ನೆಪ ಹೇಳಬೇಡ. ಕನ್ನಡ ಕಲಿಯಲೇಬೇಕೆಂದಿದ್ದರೆ ಐದು ವರ್ಷದಲ್ಲಿ ನಿನಗ್ಯಾರೂ ಸಿಗಲೇ ಇಲ್ಲವೇ?", ನಾನೂ ಪಟ್ಟು ಬಿಡದೇ ಕೇಳಿದೆ. ನಾನು ಒರಟಾಗಿ ಕೇಳುತ್ತಿದ್ದೇನೆಂದು ನನಗರ್ಥವಾಗುತ್ತಿದೆ. ಆದರೂ ಐದು ವರ್ಷದಿಂದ ಬೆಂಗಳೂರಿನಲ್ಲಿರುವ ತಮಿಳರ ಹುಡುಗಿ ಕನ್ನಡ ಕಲಿಯದಿದ್ದಕ್ಕಾಗಿ ಕಿರಿಕಿರಿಯಾಗುತ್ತಿದೆ.

"ನಿಜಕ್ಕೂ ಯಾರೂ ಸಿಗಲಿಲ್ಲ, ನನ್ನನ್ನು ನಂಬು", ಅವಳೆಂದಳು.


"ಏನು ಹಾಗೆಂದರೆ? 'ಮೂವತ್ತು ದಿನಗಳಲ್ಲಿ ಕನ್ನಡ ಕಲಿಯಿರಿ' ಎಂಬ ಪುಸ್ತಕ ಸಿಗುತ್ತದೆ. ಕನಿಷ್ಟ ಮಟ್ಟಕ್ಕಾದರೂ ಅದರಿಂದ ಕನ್ನಡವನ್ನು ಕಲಿಯಬಹುದು. ನಂತರ ಒಂದು 'ಕನ್ನಡ ಟು ಇಂಗ್ಲಿಷ್' ಶಬ್ದಕೋಶ ಖರೀದಿಸಿ, ಯಾವುದೋ ಕನ್ನಡ ಪುಸ್ತಕ ಓದಲಾರಂಭಿಸಿದರಾಯಿತು. ಬರಲಾರದ್ದೇನಿದೆ?"


"ಆಯಿತಪ್ಪ, ನಾಳೆಯಿಂದ ಅದನ್ನೇ ಮಾಡುತ್ತೇನೆ, ಸರಿಯಾ?"


ನನಗೆ ಸಮಾಧಾನವಾಗುತ್ತಿಲ್ಲ, "ಬೇಕೆಂದೇ ತಮಿಳರನ್ನು ಸೇರಿಕೊಂಡು ಅವರಲ್ಲೇ ಯಂಡ ಪೊಂಡ ಎಂದು ಗದ್ದಲ ಮಾಡಿ ತಮಿಳು ಸಿನೆಮಾ ಹುಡುಕಿಕೊಂಡು ಹೋಗುತ್ತೀ. ಅದರ ಬದಲು ಕನ್ನಡ ಸಿನೆಮಾ ನೋಡಿದರಾಗದೇ?"


"ಆಯ್ತು. ಮುಂದಿನ ವಾರ ನನ್ನನ್ನು ಕನ್ನಡ ಸಿನೆಮಾಗೆ ನೀನೇ ಕರೆದುಕೊಂಡು ಹೋಗು. ಇನ್ನು ಮೇಲೆ ಪ್ರತೀ ವಾರ ನಂದೂ ನಿಂದೂ ಒಂದು ಕನ್ನಡ ಸಿನೆಮಾ ಕಡ್ಡಾಯ", ಅವಳ ನಗು ನಿಂತಿದೆ. ಆದರೆ ನನ್ನನ್ನು ಸಮಾಧಾನ ಮಾಡಲು ಯತ್ನಿಸುತ್ತಿರುವುದು ಗೊತ್ತಾಗುತ್ತಿದೆ.


"ನಾನೇನೂ ಬರಲ್ಲ ಹೋಗು. ಈ ಸಿನೆಮಾನ ನಾನು ಮೊದಲೇ ತಮಿಳಿನಲ್ಲಿ ನೋಡಿದ್ದೀನಿ ಎಂದು ನನಗೆ ಕತೆ ಹೇಳಲು ಪ್ರಾರಂಭಿಸುತ್ತೀ"


"ಸರಿ, ಅದನ್ನೂ ಹೇಳಲ್ಲಪ್ಪ, ಮುಂದಿನ ವಾರ ಸಿನೆಮಾಗೆ ಹೋಗೋಣ"


ನನಗೆ ಸಮಾಧನವಾಗುತ್ತಿಲ್ಲ, "ನೀನಾದರೂ ಏನು ಮಾಡುತ್ತೀ ಬಿಡು, ಹಿಂದಿ ಹಾಡನ್ನು ಜನ ಕೇಳಿದರೆ ಕೂಗಾಡುವ ನಾವು ದುಡ್ಡು ಮಾಡಲು ಯಾವ ಭಾಷೆಯಾದರೂ ಸರಿ, ಅಲ್ಲಿಯ ಸಿನೆಮಾವನ್ನು ತಂದು ಕನ್ನಡಕ್ಕೆ ಭಟ್ಟಿ ಇಳಿಸುತ್ತೇವೆ. ಅವರಲ್ಲೇ ಒಬ್ಬ ಸ್ವಂತದ್ದೊಂದು ಸಿನೆಮಾ ತೆಗೆದರೆ ಅದು ಎಲ್ಲಿಂದ ಕದ್ದಿರಬಹುದು ಎಂದು ಬೇಡದ ಸಾಕ್ಷಿಯನ್ನೆಲ್ಲ ತಂದು ಕೆದಕತೊಡಗುತ್ತೇವೆ."


"ಅದನ್ನೆಲ್ಲ ಬಿಡು ಈಗ. ನನಗೂ ನಿನಗೂ ಅದೆಲ್ಲ ಏಕೆ? ನನಗೆ ನೀನು ಮುಖ್ಯ, ಸಿನೆಮಾ ಮಂದಿ ಏನು ಮಾಡುತ್ತಾರೆ ಅದನ್ನು ತೆಗೆದುಕೊಂಡು ನಾವೇನು ಮಾಡೋಣ ಈಗ?"


"ಪೇಪರಿನಲ್ಲಿ ಬಂದ ಸುದ್ದಿಗೆ ಮೊದಲು ಕಮೆಂಟ್ ಮಾಡಿದ್ದು ಯಾರು?"


"ಆಯಿತಪ್ಪ, sorry. ಸುಮ್ನೆ timepass ಗೆ ಅಂತ ಏನೋ ಮಾತಾಡಲು ಹೋಗಿ ಬಾಯಿ ಜಾರಿತು. ನಿಜಕ್ಕೂ ಅದರ ಬಗ್ಗೆ ಅಷ್ಟು ಗಂಭೀರವಾಗಿ ನಾನು ಯೋಚಿಸಲಿಲ್ಲ"


"ಆದರೂ ನಿನಗೆ ಈ ಐದು ವರ್ಷಗಳಲ್ಲಿ ಕನ್ನಡ ಕಲಿಯಬೇಕೆಂದೇ ಅನಿಸಲಿಲ್ಲವೇ?" ನಾನು ಮೊದಲಿದ್ದಲ್ಲಿಗೇ ಬಂದೆ.


"ಕಲಿಯಬೇಕೆಂದು ಅನ್ನಿಸಿತ್ತು ಕಣೋ. ಆಗಲೇ ಹೇಳಿದೆನಲ್ಲ? ಹೇಗೆ ಕಲಿಯಬೇಕೆಂದು ತಿಳಿಯಲಿಲ್ಲ, ಪುರುಸೊತ್ತೇ ಆಗಲಿಲ್ಲ"


"ಇಲ್ಲಿಗೆ ಬಂದು ಒಂದು ನೌಕರಿ ಹುಡುಕಲು ನಿನಗೆ ಪುರುಸೊತ್ತಿತ್ತು, ಇಲ್ಲೇ ಒಂದು ಮನೆಯನ್ನು ಕೊಳ್ಳಲೂ ನಿನಗೆ ಪುರುಸೊತ್ತಿದೆ, ದುಡ್ಡಿದೆ. ಇಲ್ಲೇ ತಮಿಳರ ಸಂಘವನ್ನು ಹುಡುಕಿ ಅದರ ಲೈಬ್ರರಿಯ ಮೆಂಬರಾಗಲು ನಿನಗೆ ಗೊತ್ತಾಗುತ್ತದೆ. ಆದರೆ ಕನ್ನಡ ಕಲಿಯಲು ನಿನಗೆ ಯಾರೂ ಸಿಗಲಿಲ್ಲ ನೋಡು. ಅದು ನಿನ್ನ priority ಯಲ್ಲಿರಲಿಲ್ಲ ಅನ್ನುವುದನ್ನು ಒಪ್ಪಿಕೋ", ನನ್ನ ಹಠ ಜಾಸ್ತಿಯಾಗುತ್ತಿದೆ. ನಾನಿದನ್ನೆಲ್ಲ ಸಿಟ್ಟಿನಲ್ಲಿ ಹೇಳುತ್ತಿದ್ದೇನೆಂದು ನನಗೆ ಅಂಥ ಸಿಟ್ಟಿನಲ್ಲೂ ಅರ್ಥವಾಗುತ್ತಿದೆ. ಆದರೆ ಸಿಟ್ಟು ನಿಯಂತ್ರಣಕ್ಕೆ ಸಿಕ್ಕುತ್ತಿಲ್ಲ.


ಅವಳು ಮಾತನಾಡಲಿಲ್ಲ.


ನಾನೇ ಮುಂದುವರಿದೆ, "ಉಳಿದವರೆಲ್ಲ ತಮ್ಮಲ್ಲಿರುವ ಇಷ್ಟನ್ನೇ ಅಷ್ಟು ಮಾಡಿ ತೋರಿಸಿ ಅಭಿಮಾನ ತೋರಿಸುತ್ತಾರೆ. ನಾವೇ ಅಭಿಮಾನ ಶೂನ್ಯರು ನೋಡು. ನಮ್ಮಲ್ಲಿರುವುದರ ಬಗ್ಗೆ ನಮಗೇ ಅಭಿಮಾನವಿಲ್ಲ. ಕನ್ನಡವನ್ನೇ ಕಲಿಯದೇ ಜೀವಮಾನ ಕಳೆದ ಜನ ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಕನ್ನಡವೇ ಗೊತ್ತಿಲ್ಲದೆ ಬದುಕಬಹುದು. ಅಂದರೆ ಅಷ್ಟರ ಮಟ್ಟಿಗೆ ಕನ್ನಡ ಅಪ್ರಸ್ತುತವಾಯ್ತು. ಇನ್ನು ನೀವ್ಯಾಕೆ ಕಲಿಯುತ್ತೀರಿ?"


ಅವಳು ಕಣ್ಣೀರಾದಳು, ನಾನು ಸುಮ್ಮನಾದೆ.

* * * * * * *

ಕಾರಿನಲ್ಲಿ ಇಬ್ಬರೇ ಹೋಗುವಾಗ ಕೇಳಿದಳು, "ದಾರಿಗಾಗಿ ಧ್ವನಿ ಮಾಡೀ ಅಂತ ಎಲ್ಲಿ ಬರೆದಿದೆ ಹೇಲು?", ಈಗೀಗ ಸಂಭಾಷಣೆ ಕನ್ನಡದಲ್ಲಿ ನಡೆಯುತ್ತದೆ.

"ಹೇಲು ಅಲ್ಲ ಹೇಳು"
"ಸರಿ, ಹೇಲು"
"ಹೇಲು ಅಲ್ಲ ಹೇಳೂ....", ನಾನು ಕೊಂಚ irritate ಆದೆ.
"ಆಯ್ತು, ಹೇಳೂ...."
"ಅದೋ ಆ ಲಾರಿಯ ಹಿಂದೆ ಬರೆದಿದೆ", ನಾನೆಂದೆ.

"ಅಲ್ಲ, ತಪ್ಪು, ಆ ಲಾರಿಯ ಹಿಂದೆ ಅಲ್ಲ, ನೋಡು ಈ ಲಾರಿಯ ಬಗ್ಗೆ ಹೇಳಿದ್ದು ನಾನು"
ನಾನು ಅವಳತ್ತ ನೋಡಿದೆ. ಅವತ್ತು ಜಗಳ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಕ್ಷಮೆಯನ್ನೇನೂ ಕೇಳಿಲ್ಲ ನಾನು. ಪಾಪ, ಪ್ರೀತಿಯಿಂದ ಹೇಳಿದ್ದರೂ ಕಲಿಯುತ್ತಿದ್ದಳು, ಅಷ್ಟಕ್ಕೆ ಭಾಷೆ ಸಂಸ್ಕೃತಿ ಅಂತೆಲ್ಲ ತರಬೇಕಿರಲಿಲ್ಲ, "ಸಾರಿ ಕಣೇ, ನಾನು ಅವತ್ತು ಅಷ್ಟೊಂದು harsh ಆಗಿ ಹೇಳಿದ್ದಕ್ಕೆ", ಎಂದೆ.

"ಪರವಾಗಿಲ್ಲ ಬಿಡು. ನಾನೂ ಐದು ವರ್ಷವಾದರೂ ಕಲಿತಿರಿಲಿಲ್ಲ ಅಲ್ವಾ?", ಅವಳ ಧ್ವನಿಯಲ್ಲಿ ನಾಟಕೀಯತೆಯೇನೂ ಇಲ್ಲ.


"ಆದರೂ ನಾನೇ ಸುಮ್ಮನೇ ಭಾವೋದ್ವೇಗಕ್ಕೆ ಒಳಗಾದೆ. ಅದರ ಅವಶ್ಯಕತೆಯಿರಲಿಲ್ಲ. ನಿನಗೆ ಬೈದಿದ್ದರಿಂದ ಕನ್ನಡವೇನೂ ಉದ್ಧಾರವಾಗಲಿಲ್ಲ ಅಲ್ಲವಾ? ಯಾರದೋ ಸಿಟ್ಟನ್ನು ನಿನ್ನ ಮೇಲೆ ತೀರಿಸಿಕೊಂಡೆನೆನಿಸುತ್ತದೆ. ಈಗಿನ ಜಗತ್ತೇ ಪ್ರಚಾರದ ಮೇಲೆ ನಿಂತಿದೆ. ಮಾತಾಡುವವನೇ ಮಹಾಶೂರ. ಆತ ಧರ್ಮ, ಭಾಷೆಯ ಬಗ್ಗೆ ನಮಗಿರುವ ವೈಯಕ್ತಿಕ ಅಭಿಮಾನವನ್ನು ಕೆರಳಿಸಿ wholesale ಆಗಿ ಮಾರುತ್ತಾನೆ. ಪ್ರತೀ ಸುದ್ದಿಯ ಹಿಂದೆ ದುಡ್ಡು ಇಲ್ಲವೇ ಪ್ರಚಾರ ಇರುವ ಸಂಭವವೇ ಜಾಸ್ತಿ ಇರುವ ಈ ದಿನಮಾನದಲ್ಲಿ, ಇಂಥ ವಿಷಯಗಳ ಬಗ್ಗೆ ಜಗಳವಾಡಿಕೊಂಡರೆ ನಾವು ನಾವು ದೂರವಾಗುತ್ತೇವೇ ಹೊರತು ಮತ್ತೇನೂ ಆಗದು. ನಮ್ಮ ಅಭಿಮಾನ ನಮ್ಮದು.ನಮ್ಮ ಭಾಷೆ ಸಂಸ್ಕೃತಿ ಶ್ರೀಮಂತವಾದರೆ ಜನ ತಾವಾಗೇ ಅದನ್ನು ಕಲಿಯುತ್ತಾರೆ. ಅದಕ್ಕೆ ವೈಯಕ್ತಿಕ ಮಟ್ಟದಲ್ಲಿ ಆದಷ್ಟು ಕೆಲಸ ಮಾಡಿದರೆ ಅಷ್ಟು ಸಾಕು. ಕನ್ನಡದ ಉಳಿವಿನ ಬಗ್ಗೆ ಅಷ್ಟೊಂದು ಭಯಭೀತರಾಗುವ ಅಗತ್ಯವಿಲ್ಲ. ಇಂಗ್ಲೀಷನ್ನು ನಮಗೆ ಯಾರೋ ಬೆದರಿಕೆ ಹಾಕಿ ಕಲಿಸಿದ್ದಾರೆಯೇ?"

ಅವಳು ಮುಗುಳ್ನಗುತ್ತ ನನ್ನತ್ತ ನೋಡಿದಳು.

14 comments:

ಸಾಗರದಾಚೆಯ ಇಂಚರ said...

ನಿಮ್ಮ ಮಾತುಗಳು ನಿಜ, ಭಾಷೆಯ ಮೇಲೆ ಅಂಧಾಭಿಮಾನ ಇರಬಾರದು,
ಆದರೆ ಭಾಷ ಪ್ರೇಮ ಬೇಕೇ ಬೇಕು

ದಿನಕರ ಮೊಗೇರ.. said...

ನೂರಕ್ಕೆ ನೂರು ಸತ್ಯ.... ಕನ್ನಡ ಮನಸ್ಸಿನಿಂದ ಕಲಿಯಬೇಕು.... by force ಕಲಿಯಲಿಕ್ಕೆ ಆಗಲ್ಲ.... ಕಲಿಯಲಿಕ್ಕೆ ಹೇಳಿ ನಿಮ್ಮ ಕಷ್ಟ ನೋಡಲು ಆಗುತ್ತಿಲ್ಲ..... ಹ ಹಾ ಹಾ.....

Raghu said...

ಸುಮ್ಮನೆ ಬಿಡಬೇಡಿ ಕನ್ನಡ ಕಲಿಸಿ... ಸ್ವಲ್ಪನಾದ್ರು ಬರಲಿ...
ನಿಮ್ಮವ,
ರಾಘು.

ಜಲನಯನ said...

ಸಪ್ತವರ್ಣದ ಪ್ರತಿವರ್ಣವೂ..
ಕಲಿನೀನು ಕಲಿ ನೀನು ಕನ್ನಡ
ತಿವಿಕ್ರಮ ಭೇತಾಳ ಬೆನ್ನ ಬಿಡಬೇಡ
ಒಂದುವಾರದಲ್ಲಿ ಕಡೇ ಪಕ್ಷ ಹೇಳಲಿ ಕನ್ನಡ
ಕ್ರಮೇಣ ನಮ್ಮಲ್ಲಾದರೂ ಹೇಳದಿರಲಿ ಎನ್ನಡ......
ಬಹಳ ಚನ್ನಾಗಿದೆ...ವಾಸ್ತವಾಂಶ ಇದು....

ಸುಧೇಶ್ ಶೆಟ್ಟಿ said...

ಸಪ್ತವರ್ಣ ಅವರೇ...

ಹೀಗೆ ಕಣ್ಣು ಹಾಯಿಸುವಾಗ ನಿಮ್ಮ ಬ್ಲಾಗ್ ಕಣ್ಣಿಗೆ ಬಿತ್ತು. ಇನ್ನೊಮ್ಮೆ ಯಾವಾಗಲಾದರೂ ಓದಿದರಾಯಿತು ಅ೦ತ ಅ೦ದುಕೊ೦ಡು ಹೋಗುವಷ್ಟರಲ್ಲಿ "ಕನ್ನಡ-ಎನ್ನಡ" ತಡೆದು ನಿಲ್ಲಿಸಿತು....

ನೀವು ನಿರೂಪಿಸಿದ ರೀತಿ ತು೦ಬಾ ಇಷ್ಟ ಆಯಿತು. ಇದು ಬಹುಶ: ಎಲ್ಲರ ಸಮಸ್ಯೆಯೂ ಇರಬಹುದೇನೋ.... ವಿಶೇಷವಾಗಿ ಬೆ೦ಗಳೂರಿನಲ್ಲಿ... ನನಗೆ ನನ್ನ ಊರಿನಲ್ಲಿ ಎ೦ದೂ ಕನ್ನಡದ ಬಗ್ಗೆ ಅನಾಥಪ್ರಜ್ಞೆ ಕಾಡಿದ್ದಿಲ್ಲ...ಇಲ್ಲಿ ಕನ್ನಡದ ಬಗ್ಗೆ ತೋರುವ ಅಸಡ್ಡೆ ಬೇಸರ ತರಿಸುತ್ತದೆ... ಅದರಲ್ಲೂ ಕನ್ನಡಿಗರೇ ತೋರಿಸುವ ಅಸಡ್ಡೇ ಅ೦ತೂ ಇನ್ನೂ ಬೇಸರದ ಸ೦ಗತಿ.

ಅ೦ತೂ ಅವರು ಕನ್ನಡ ಕಲಿಯುವ ಹಾಗೆ ಮಾಡಿಬಿಟ್ಟಿರಿ ಅನ್ನಿ :)

Anonymous said...

ಸುಪ್ತವರ್ಣ ಅವರೆ,
ನಿಮ್ಮ ಎಲ್ಲ ವರ್ಣಗಳನ್ನು ಓದಿದೆ... ಕೆಲವು ಅದ್ಭುತವಾಗಿವೆ... ಇನ್ನೂ ಕೆಲವು ಚೆನ್ನಾಗಿವೆ... ಒಂದು ಸ್ವಲ್ಪ ಸಪ್ಪೆ ಎನಿಸಿತು... ಆದರೂ ನಿಮ್ಮ ಮುಂದಿನ ವರ್ಣದ ಅನಾವರಣ ಯಾವಾಗ ಎಂದು ನಿರೀಕ್ಷಿಸುತ್ತಿದ್ದೇನೆ...
ಓದುಗ...

ಸಿಮೆಂಟು ಮರಳಿನ ಮಧ್ಯೆ said...

ಸುಪ್ತವರ್ಣ...

ನಾನು ದೆಶದ ಬಹುತೇಕ ಭಾಗಗಳಿಗೆ..
ಹೊಟ್ಟೆಪಾಡಿಗೆ ಹೋಗಿದ್ದಕ್ಕೋ ಏನೊ..
ಅನ್ಯ ಭಾಷಿಕರ ಮೇಲೆ ಸ್ವಲ್ಪ ಕನಿಕರ ಬಂದುಬಿಡುತ್ತದೆ..
ನನ್ನ ಬಳಿ ಕೆಲಸಮಾಡುವ ಹೆಚ್ಚಿನ ಜನರು ತಮಿಳರು ಮತ್ತು ತೆಲುಗು ಜನ...

ಮೊನ್ನೆ ವಿಷ್ಣು ವರ್ಧನ್ ತೀರಿಕೊಂಡಾಗ ನನ್ನ ಕೆಲಸಗಾರರಿಗೆ ರಜೆ ಕೊಟ್ಟಿದ್ದೆ...

ಭಾಷೆಯ ಮೇಲೆ ಅಭಿಮಾನ ಇರಲೇ ಬೇಕು..
ದುರಭಿಮಾನ ಇರಬಾರದು...

ಇಲ್ಲಿಯ ನೀರು, ಊಟ ತಿಂದು ಭಾಷೆಕಲಿಯದಿದ್ದರೆ ಅದು ತಪ್ಪು...

ಹಾಗೇಯೇ ನಾವು ಅವರಿಗೆ ಕಲಿಸದಿದ್ದರೆ ಅದು ನಮ್ಮ ತಪ್ಪು...

ಅಂದಹಾಗೆ ನನಗೆ ಎಂಟು ಭಾಷೆ ಮಾತನಾಡಲು ಬರುತ್ತಿತ್ತು...(ಈಗ ಕೆಲವು ಮರೆತುಹೋಗುತ್ತಿದೆ)

ಚಂದದ ಬರಹಕ್ಕೆ ಅಭಿನಂದನೆಗಳು....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

:-) ಚೆನ್ನಾಗಿದೆ!

Karthik H.K said...

ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ. ಬಹುಪಾಲು ಕನ್ನಡಿಗರು ನಿರಭಿಮಾನಿಗಳಾಗಿರುವುದೇ ಇದಕ್ಕೆ ಕಾರಣ. "ಎಕ್ಕಡ ಎನ್ನಡಗಳ ಮಧ್ಯೆ ಕಳೆದು ಹೋಗದಿದ್ದರೆ ಸಾಕು ನಮ್ಮ ಕನ್ನಡ!"

ಆದರೂ ಸಾಹಿತ್ಯ ಶ್ರೀಮಂತಿಕೆಯಿರುವ, ವೈಜ್ಞಾನಿಕವಾಗಿ ಶುದ್ಧವಾಗಿರುವ ನಮ್ಮ ನುಡಿ ಖಂಡಿತ ನಶಿಸುವುದಿಲ್ಲ. ಆ ನಂಬಿಕೆ ನನಗಿದೆ!

Deepasmitha said...

ಕನ್ನಡೇತರರಿಗೆ ನಾವು ಕನ್ನಡಿಗರೇ ಕಲಿಸಬೇಕು. ಸುಮ್ಮನೆ ಹೋರಾಟ, ಹಾರಾಟ, ಚೀರಾಟ ಎನ್ನುತ್ತ ದೊಂಬಿ ಎಬ್ಬಿಸುವ ಬದಲು, ಅವರಿಗೆ ಇಲ್ಲಿ ಕನ್ನಡ ಕಲಿಯದೆ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಸಬೇಕು. ನಿಮ್ಮ ಬರಹ ಇಷ್ಟವಾಯಿತು

ವಿ.ರಾ.ಹೆ. said...

ರೇಡಿಯೋ ಸ್ಟೇಷನ್ನಿನವರಿಗೆ ಪ್ರೀತಿಯಿಂದ ಎಷ್ಟೋ ಬಾರಿ ಹೇಳಿದರೂ ಕೇಳದಿದ್ದಾಗ ಕೊನೆಗೆ ದಂಡಂದಶಗುಣಂ ಮಾಡಿದ್ದು. ಪ್ರೀತಿಗೂ ಬಗ್ಗದೇ ಅಸಡ್ಡೆ ತೋರಿಸುವವರು ಬಹಳ ಜನ ಇದ್ದಾರೆ ಇಲ್ಲಿ. ಆದ್ದರಿಂದ ಇದು ಅನಿವಾರ್ಯ. ಆದರೆ ವಿಪರ್ಯಾಸ ಎಂದ ಸುಮಾರು ಕನ್ನಡಿಗರೇ ಕನ್ನಡದ ಬಗ್ಗೆ ನಿರಭಿಮಾನಿಗಳಾಗಿರುವುದು. ವೈಯಕ್ತಿಕ ಮಟ್ಟದಲ್ಲಿ ಕನ್ನಡಿಗನಾಗಿರುವುದರ ಜೊತೆ ಸಮಾಜದಲ್ಲೂ ಕನ್ನಡ ವಾತಾವರಣ ನಿರ್ಮಿಸಲು ನಮ್ಮ ಪ್ರಯತ್ನ ಬೇಕೇ ಬೇಕಾಗುತ್ತದೆ.

Subrahmanya said...

ನಾವು ಅವರಿಗೆ ಅರ್ಥವಾಗಲಿ ಎಂದು ಅರೆಬರೆ ತಮಿಳು ಮಾತನಾಡಿದರೂ, ಅವರು ಕನ್ನಡ ಕಲಿಯಲು ಯತ್ನಿಸುವುದಿಲ್ಲ. ಕನ್ನಡ-ಹಿಂದಿ ಎಂದರೆ, ’ಅವರು’ ಹಂದಿಗಳಾಗುತ್ತಾರೆ. ನನಗಿದು ನಿತ್ಯದ ಅನುಭವ. ನಾವು ತುಂಬಾ ಉದಾರಿಗಳು ಬಿಡಿ.

ಕೃಷ್ಣ ಶಾಸ್ತ್ರಿ - Krishna Shastry said...
This comment has been removed by the author.
ಕೃಷ್ಣ ಶಾಸ್ತ್ರಿ - Krishna Shastry said...

ಕೆಲವು ವಿಷಯಗಳಲ್ಲಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು ಎಂದನಿಸುತ್ತದೆ, ಇನ್ನು ಕೆಲವೊಮ್ಮೆ ಇತರರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದನಿಸುತ್ತದೆ. ಒಟ್ಟಿನಲ್ಲಿ ಇದೊಂದು ಸಂದಿಗ್ಧ ವಿಷಯವೇ ಸೈ.

ಈ ನಿಟ್ಟಿನಲ್ಲಿ ನಾನು ಇತ್ತೀಚೆಗೆ ಪ್ರಕಟಿಸಿದ ಒಂದು ಸಂಭಾಷಣೆ ಇಲ್ಲಿದೆ ನೋಡಿ: http://krishnashastry.blogspot.com/2011/08/kannada-vs-kanglish.html