Sunday, May 2, 2010

ಏಪ್ರಿಲ್ ಫೂಲ್ !

ಬೆಂಗಳೂರಿನ ಕಾಲೇಜೊಂದರ ಕ್ರೀಡಾಂಗಣ. ಮಧ್ಯದಲ್ಲಿರುವ ಬಾಸ್ಕೆಟ್ ಬಾಲ್ ಅಂಗಳದ ಸುತ್ತಲೂ ಕಿಕ್ಕಿರಿದು ತುಂಬಿಕೊಂಡು ಕೂತ ವಿದ್ಯಾರ್ಥಿಗಳು. ಸುಮ್ಮನೇ ಹೀಗೆ ಗಾಳಿ ಸೋಕಿದರೂ ಕಿಸಕ್ಕೆನ್ನುವ ವಯಸ್ಸಿನ ಹುಡುಗಿಯರು, ಬೆನ್ನ ಹಿಂದ ಕೂತ ಹುಡುಗರ ನಿಮಿತ್ತ ಮಾತ್ರದ 'ಏನ್ ಮಗಾ' ಡಯಲಾಗುಗಳಿಗೆ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಮಧ್ಯೆ ಮಧ್ಯೆ ತಮ್ಮೊಳಗೇ ಮಾತಾಡಿಕೊಂಡು ನಗುತ್ತ, 'ನಾವು ಈಗಷ್ಟೇ ನಕ್ಕಿದ್ದು ನೀವಂದಿದ್ದಕ್ಕಲ್ಲ' ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಹುಡುಗರ ಕ್ರಿಯಾಶೀಲತೆ ಇನ್ನೂ ಹೆಚ್ಚುತ್ತಿದೆ. ಪಿಯುಸಿಯಿಂದ ಹಿಡಿದು ಡಿಗ್ರಿಯವರೆಗೆನ, ಸಾವಿರಗೆಟ್ಟಲೆ ಇರುವ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ಕಲರವದ ಮಧ್ಯೆ, ಹಳ್ಳಿಯೊಂದರ ಕಾಲೇಜಿನಿಂದ ಮೊದಲ ಬಾರಿಗೆ ಬೆಂಗಳೂರಿಗೆ ಬಂದು, ಕ್ರೀಡಾಂಗಣದ ಮಧ್ಯದಲ್ಲಿ ಒಬ್ಬನೇ ನಿಲ್ಲಬೇಕೆಂದರೆ ಎಂಟೆದೆ ಬೇಕು!

ಹಾಗೆ ನಿಂತಿದ್ದಾನೆ, ದೂರದ ಅಂಕೋಲಾದಿಂದ ಬಂದಿರುವ ಗಣಪತಿ ನಾಯ್ಕ! ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ!

ಬಾಸ್ಕೆಟ್ ಬಾಲ್ ಅಂಗಳದ ಒಂದು ತುದಿಯಲ್ಲಿ ನಿಂತಿರುವ ಆತ ಇನ್ನೊಂದು ತುದಿಯ ಬೋರ್ಡಿಗೆ ಎದುರಾಗಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ, ಈ ತುದಿಯಿಂದ ಆ ತುದಿಯ ಬಲೆಯಲ್ಲಿ ಚೆಂಡನ್ನು ತೂರಿಸಿದ್ದೇ ಆದಲ್ಲಿ ಆತನ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದರ ಜೊತೆಗೆ, ಆತ ಬಯಸಿದಲ್ಲಿ ಬೆಂಗಳೂರಿನ ಅದೇ ಕಾಲೇಜಿನಲ್ಲಿ ಕಲಿಯುವ ಮತ್ತು ಉಚಿತವಾಗಿ ಹಾಸ್ಟೆಲಿನಲ್ಲಿ ಇರುವ ಅವಕಾಶವನ್ನೂ ಕೊಡುತ್ತೇವೆಂದು ಅವನಿಗೆ ಹೇಳಲಾಗಿದೆ. ಆತನಿಗೆ ಮೂರು ಅವಕಾಶ ನೀಡಲಾಗಿದೆ.

ಅವನು ಈ ಸವಾಲನ್ನು ಒಪ್ಪಿಕೊಂಡಿರುವುದು ಬೆಂಗಳೂರಿನಲ್ಲಿ ಕಲಿಯುವ ಆಸೆಗಲ್ಲ. ಬೆಂಗಳೂರು ಹಾಳು ಬಿದ್ದು ಹೋಗಲಿ. ತನಗೆ ಊರಲ್ಲಾದರೂ ಉಚಿತವಾಗಿ ಕಲಿಯುವ ಅವಕಾಶವಾದರೆ, ತಾನು ಬೆಳಿಗ್ಗೆ ಪೇಪರ್ ಮತ್ತು ಹಾಲು ಹಂಚಿ, ಸಾಯಂಕಾಲ ಟ್ಯೂಷನ್ ಹೇಳಿ ಸಂಪಾದಿಸುವ ಹಣವನ್ನು ಅಪ್ಪನಿಗೆ ಕೊಡಬಹುದು. ಅಷ್ಟರ ಮಟ್ಟಿಗೆ ಅಪ್ಪ ಹಮಾಲಿ ಕೆಲಸ ಮಾಡುವುದು ತಪ್ಪುತ್ತದೆ!

ಆದರೆ ಆತನಿಗೆ ತಿಳಿಯದ ವಿಷಯವೊಂದಿದೆ!

ಈ ತುದಿಯಲ್ಲಿ ನಿಂತು ಆ ತುದಿಯ ಬೋರ್ಡಿನಲ್ಲಿ ಗೋಲು ಗಳಿಸುವುದು ಅವನಿಂದ ಹೇಗೂ ಸಾಧ್ಯವಿಲ್ಲವೆಂಬುದು ಆಯೋಜಕರಿಗೆ ಗೊತ್ತು. ತನ್ನ ಬಡತನದಿಂದಾಗಿ ಆಸೆಗೆ ಬಿದ್ದು ಒಪ್ಪಿಕೊಂಡಿದ್ದಾನೆಂಬುದೂ ಅವರಿಗೆ ತಿಳಿದಿದೆ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಆತ ಗೋಲಿಗಾಗಿ ಯತ್ನಿಸುತ್ತಿದ್ದರೆ, ಆತ ಚೆಂಡನ್ನು ಎಸೆದ ಎರಡನೇ ಕ್ಷಣಕ್ಕೇ ಜೋರಾಗಿ ಕೂಗಿ, ಕೇಕೆ ಹೊಡೆದು, ಚಪ್ಪಾಳೆ ತಟ್ಟುವಂತೆ ಸುತ್ತಲೂ ಕೂತ ಹುಡುಗ ಹುಡುಗಿಯರಿಗೆ ಗುಟ್ಟಾಗಿ ಹೇಳಲಾಗಿದೆ. ತಾನು ಗೋಲು ಹೊಡೆದೆನೆಂದೇ ಅವನಿಗೆ ಭ್ರಮೆ ಹುಟ್ಟಿಸುವುದು ಅವರ ಉದ್ದೇಶ. ಹಾಗೆ ಆತ ಸುಳ್ಳೇ ಆನಂದದಿಂದ ಕುಣಿಯುತ್ತಿದ್ದರೆ ಆತನ ಮುಖದ ಭಾವನೆಯನ್ನು ಚಿತ್ರೀಕರಿಸಲು ವೀಡಿಯೋ ಕ್ಯಾಮೆರಾಗಳು ಸಿಧ್ಧವಾಗಿವೆ. ಮುಂದೆ ಅದು ಟೀವಿ ಚ್ಯಾನೆಲ್ಲೊಂದರ ರಿಯಾಲಿಟಿ ಕಾರ್ಯಕ್ರಮದಲ್ಲಿ ಮನರಂಜನೆಯಾಗಿ ಪ್ರಸಾರವಾಗಲಿದೆ! ಹಾಗೆ ಆತನನ್ನು 'ಕುರಿ' ಮಾಡಲಿದ್ದೇವೆಂದು ಟೀವಿ ವೀಕ್ಷಕರಿಗೂ ಕಾರ್ಯಕ್ರಮದ ಮೊದಲೇ ಹೇಳಲಾಗಿರುತ್ತದೆ. ಅದು ಮೋಜನ್ನು ಮತ್ತಷ್ಟು ಹೆಚ್ಚಿಸುತ್ತದೆಂದು ಅವರಿಗೆ ಅನುಭವದಿಂದ ತಿಳಿದಿದೆ. ಈ ಯೋಚನೆ ಮೊದಲು ಬಂದಿದ್ದು ಕಾಲೇಜಿನ ಪ್ರಿನ್ಸಿಪಾಲರಿಗೆ. ಯಾವತ್ತೂ ಸೋತಿರದ ತಮ್ಮ ಬಾಸ್ಕೆಟ್ ಬಾಲ್ ತಂಡದ ಇವತ್ತಿನ ಸೋಲಿಗೆ ಕಾರಣನಾದ ಯಕಃಶ್ಚಿತ್ ಅಂಕೋಲಾ ಟೀಮಿನ ಕ್ಯಾಪ್ಟನ್, ಗಣಪತಿ ನಾಯ್ಕನ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುವುದು ತುಂಬಾ ಚಿಕ್ಕ ಕಾರಣ. ಅದಕ್ಕಿಂತ ದೊಡ್ಡ ಕಾರಣವೆಂದರೆ ತಮ್ಮ ಕಾಲೇಜಿನ ಹೆಸರು ಈ ಬಾರಿ ಟೀವಿಯ ಕಾರ್ಯಕ್ರಮದಲ್ಲಿ ಬರುವುದು. ಮುಂದಿನ ವರ್ಷದ ಅಡ್ಮಿಷನ್ ವ್ಯವಹಾರಕ್ಕೆ ಇದು ತುಂಬಾ ಅನುಕೂಲ.

ಪ್ರಿನ್ಸಿಪಾಲರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆದರು. ಅವರ ಕೇಕೆ ಮುಗಿಲು ಮುಟ್ಟುತ್ತಿದ್ದಂತೆ ಗಣಪತಿ ನಾಯ್ಕನಿಗೆ ಒಂದು ಕ್ಷಣದ ಮಟ್ಟಿಗೆಎದೆ ನಿಂತಂತಾಯಿತು. ಆತನಿಗೆ ತಾನು ಪೇಪರ್ ಹಂಚುತ್ತಿದ್ದ ದಿನಗಳು ನೆನಪಾದವು! ಗಲ್ಲಿಯ ನಡುವಿನ ಚಿಕ್ಕ ಚಿಕ್ಕ ಮನೆಗಳು. ಮುಖ್ಯರಸ್ತೆಯೆಂದು ಕರೆಯಲ್ಪಡುವ ದೊಡ್ಡಗಲ್ಲಿಯಲ್ಲೇ ನಿಂತು ಅಡ್ಡರಸ್ತೆಯೆಂದು ಕರೆಯಲ್ಪಡುವ ಚಿಕ್ಕಗಲ್ಲಿಯ ಮನೆಗಳ ಕಂಪೌಂಡುಗಳಿಗೆ ಪೇಪರ್ ಎಸೆಯುತ್ತಿದ್ದ ರೀತಿ. ಚೂರೂ ಗುರಿ ತಪ್ಪದೇ! ಅದು ಮುಂದೊಂದು ದಿನ ಪ್ರಯೋಜನಕ್ಕೆ ಬಂತು!

ಗಣಪತಿ ನಾಯ್ಕ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಅಂಕೋಲಾದಲ್ಲೇ. ಅವನಿರುವ ಪರಿಸರದಲ್ಲಿ ವಿದ್ಯಾಭ್ಯಾಸ ಎನ್ನುವುದೊಂದು ಅವಶ್ಯಕತೆ ಎಂದು ಯಾರಿಗೂ ಅನಿಸಿಲ್ಲ. ಹುಡುಗ ದುಡಿಯುವ ವಯಸ್ಸಿಗೆ ಬರುವವರೆಗೆ ಶಾಲೆಯಲ್ಲಿರಲಿ ಎಂಬ ಕಾರಣಕ್ಕೆ ಎಲ್ಲರಂತೆ ಅವನೂ ಶಾಲೆಗೆ ದೂಡಲ್ಪಟ್ಟವ. ಅವನಿಗೂ ಅಷ್ಟೆ, ತಾನು ಕಲಿಯಬೇಕು ಎಂದು ಯಾವತ್ತೂ ಅನಿಸಿಲ್ಲ. ಅದಕ್ಕೆ ತಕ್ಕಂತೆ ರಿಟೈರ್ ಆಗಲು ಕೆಲವೇ ವರ್ಷಗಳಿರುವ ಮಾಸ್ತರು. ಗಣಿತಕ್ಕೊಬ್ಬರು, ಸೈನ್ಸಿಗೊಬ್ಬರು, ಅದಕ್ಕೊಬ್ಬರು, ಇದಕ್ಕೊಬ್ಬರು ಎನ್ನುವಷ್ಟೆಲ್ಲಾ ದೊಡ್ಡ ಶಾಲೆಯಲ್ಲ ಅದು. ಶಾಲೆಗೊಬ್ಬ ಮಾಸ್ತರು, ಅವರು ಕಲಿಸಿದ್ದೇ ವಿದ್ಯೆ. ಇಂಥ ಸ್ಥಿತಿಯಲ್ಲಿ ಮಾಸ್ತರರ ಅನುಕೂಲಕ್ಕೆ ಸಿಕ್ಕಿದ್ದು ವಿನಾಯಕ ಭಟ್ಟ. ಆತ ಗಣಿತದಲ್ಲಿ ಎಷ್ಟು ಹುಶಾರಿ ಎಂದರೆ ಮಾಸ್ತರು ಕೇಳುವ ಮೊದಲೇ ಹೇಳಿಬಿಡುವ. ಮಾಸ್ತರಿಗೆ ಬೇಕಾದ್ದೂ ಅದೇ. ಇವತ್ತೋ ನಾಳೆಯೋ ಸ್ಕೂಲು ಬಿಟ್ಟುಬಿಡುವ ಗಣಪತಿ ನಾಯ್ಕನಂತವರೆದುರಿಗೆ ಗಂಟಲು ಹರಿದುಕೊಳ್ಳುವುದಕ್ಕಿಂತ ವಿನಾಯಕ ಭಟ್ಟನಂತವನೊಬ್ಬನನ್ನು ಮಾದರಿಯಾಗಿಟ್ಟುಕೊಂಡು ಬಿಟ್ಟರೆ ಗಣಿತ ಕಲಿಸಿ ಮುಗಿಸಿದಂತೆಯೇ. ಅವನಿಗೆ ಅರ್ಥವಾದರೆ ಇಡೀ ಕ್ಲಾಸಿಗೆ ಅರ್ಥವಾದಂತೆ ಲೆಕ್ಕ! ಕಲಿತು 'ಮುಂದೆ' ಬರಬೇಕಾದ ವಿನಾಯಕ ಭಟ್ಟನಿಗೂ, ವಿದ್ಯೆ ಕಲಿಸಬೇಕಾದ ಮಾಸ್ತರಿಗೂ ಮಧ್ಯೆ ತಾವೆಲ್ಲ ಅಪ್ರಸ್ತುತ ಎಂದು ಗಣಪತಿಗೆ ಅನಿಸತೊಡಗಿತು. ಮಾಸ್ತರು ಕಲಿಸಬೇಕಾದ್ದು ಯಾರಿಗೆ? ಏನೂ ಗೊತ್ತಿಲ್ಲದ ತನಗಾ ಅಥವಾ ಸ್ವತಃ ಮಾಸ್ತರದೇ ಅವಶ್ಯಕತೆಯಿಲ್ಲದ ವಿನಾಯಕ ಭಟ್ಟನಿಗಾ? ಇಷ್ಟು ಲೆಕ್ಕಾಚಾರವೂ ಅರ್ಥವಾಗದ ಮಾಸ್ತರು ಬರೇ ಗಣಿತದ ಲೆಕ್ಕಾಚಾರದಲ್ಲಿ ಮಾತ್ರ ಬುಧ್ಧಿವಂತರು ಎಂಬ ಲೆಕ್ಕಾಚಾರಕ್ಕೆ ಗಣಪತಿ ಬಂದ. ಇನ್ನೇನು ತಂದೆಯೊಂದಿಗೆ ತಾನೂ ದಿನಾ ದುಡಿಮೆಗೆ ಇಳಿಯುವುದೇ ಸರಿ ಎಂಬ ನಿರ್ಧಾರಕ್ಕೆ ಬಂದ ಗಣಪತಿಯ ಅದೃಷ್ಟ ತಿರುಗುವುದಿತ್ತು.

ಮಾಸ್ತರರಿಗೆ ಅದೇ ವರ್ಷ ವರ್ಗವಾಯಿತು! ಅದಕ್ಕೆ ಕಾರಣ ಬಿಜಾಪುರ ಶಾಲೆಯ ಪೀಟಿ ಮಾಸ್ತರರು. 'ಹೆಡ್ ಮಾಸ್ತರರಾಗಿ ಪ್ರೊಮೋಷನ್ ಬೇಕೆಂದರೆ ದೂರದ ಅಂಕೋಲಾಗೆ ಟ್ರಾನ್ಸ್ ಫರ್ ಮಾಡುತ್ತೇವೆ ನೋಡು' ಎಂಬ ಬೆದರಿಕೆಯನ್ನೊಪ್ಪಿ ಅಂಕೋಲಾ ಶಾಲೆಗೆ ವರ್ಗವಾಗಿ ಬಂದ ಬಿರಾದರ್ ಮಾಸ್ತರು!

ಬಿರಾದಾರ್ ಮಾಸ್ತರು ಯುವಕರು. ಅವರ ಮಾತಿಗೊಮ್ಮೆ ಬರುವ 'ಅವುನವುನ' ಥರದ ಬೈಗುಳಗಳನ್ನು ಕೇಳಿ ಮೊದಮೊದಲು 'ಹೊಸ ಮಾಸ್ತರು ಅಧೀಕ್ಷಣಿ' ಎಂದುಕೊಂಡರೂ, ಕ್ರಮೇಣ ಅದು ಬಯಲುಸೀಮೆಯವರು, ಅಲ್ಪವಿರಾಮ, ಪೂರ್ಣವಿರಾಮಗಳಿಗೆ ಬದಲಾಗಿ ಬಳಸುವ ಶಬ್ದಗಳೆಂದು ಗಣಪತಿ ನಾಯ್ಕನಂತವರಿಗೆ ಅರ್ಥವಾಗತೊಡಗಿತು. ಸ್ವಾಭಾವಿಕವಾಗಿಯೇ ಗಣಿತ, ಸೈನ್ಸುಗಳ ಜೊತೆಗೆ ಬಿರಾದರ ಮಾಸ್ತರರು ಕ್ರೀಡೆಗೂ ಉತ್ತೇಜನ ಕೊಡತೊಡಗಿದರು. 'ಯೇ ನಿಮ್ಮವುನ, ಏನಿಡೀ ದಿನ ಕ್ರಿಕೆಟ್ ಆಡ್ತೀರಲೇ? ಹುಸ್ಸೂಳಿಮಕ್ಕಳ್ರ್ಯಾ, ಬಾಸ್ಕೆಟ್ ಬಾಲ್ ಆಡೂಣ ನಡೀರಲೇ, ನಾ ಕಲಿಸ್ತೇನಿ' ಎಂದಂದು ಬಾಸ್ಕೆಟ್ ಬಾಲ್ ಆಟವನ್ನು ಪರಿಚಯಿಸಿದರು. ಪೇಪರ್ ಎಸೆದು ರೂಢಿಯಿದ್ದ ಗಣಪತಿ ನಾಯ್ಕ, ಈ ಆಟವನ್ನು ಎಲ್ಲರಿಗಿಂತ ಮೊದಲು ಕಲಿತ! ಆಟದಲ್ಲಿ ಮಿಂಚುತ್ತಿದ್ದ ಹುಡುಗರಿಗೆ, ಗಣಿತ, ಸೈನ್ಸಿನ ಕ್ಲಾಸಿನಲ್ಲಿ ಪೆಟ್ಟು ತಿನ್ನುವುದರಿಂದ ರಿಯಾಯತಿ ದೊರೆಯತೊಡಗಿತು. ಸಹಜವಾಗಿಯೇ ಬಡವರ ಮಕ್ಕಳು ಮಾಸ್ತರರ ಜೊತೆಗೆ ಹುರುಪಿನೊಂದಿಗೆ ಆಟದ ತರಬೇತಿ ಪಡೆಯತೊಡಗಿದರು. ಏಳನೇ ತರಗತಿ ಮುಗಿಯುತ್ತಿದ್ದಂತೆ ಶಾಲೆ ಬಿಡಬೇಕೆಂದಿದ್ದ ಹುಡುಗರನ್ನು ಒತ್ತಾಯ ಮಾಡಿ ಹೈಸ್ಕೂಲಿಗೆ ಸೇರಿಸಿದ್ದೇ ಬಿರಾದರ ಮಾಸ್ತರರು. ವಿದ್ಯಾಭ್ಯಾಸದ ಖರ್ಚಿಗೆ ಮತ್ತು ದುಡಿಯುವ ವಯಸ್ಸಿಗೆ ಬಂದ (!) ಮಕ್ಕಳು ಹೈಸ್ಕೂಲಿಗೆ ಸೇರಲು ತಂದೆತಾಯಿಯರ ವಿರೋಧವಿರುವಂಥವರಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡುವಂತೆ ಹುರಿದುಂಭಿಸಿದರು. ಗಣಪತಿ ನಾಯ್ಕನ ಉದಾಹರಣೆಯಂತೂ ಆಗಲೇ ಇತ್ತಲ್ಲ! ಹಾಗಾಗಿ ಪ್ರಾಥಮಿಕ ಶಾಲೆಯ ಬಾಸ್ಕೆಟ್ ಬಾಲಿನ ತಂಡ ಹೈಸ್ಕೂಲಿನಲ್ಲೂ ಮುಂದುವರೆಯಿತು. ಸ್ಕೂಲು ಮುಗಿದ ಮೇಲೆ ದುಡಿಮೆ ಶುರು. ಅದು ಮುಗಿದ ಮೇಲೆ ಬಾಸ್ಕೆಟ್ ಬಾಲ್ ತರಬೇತಿ. ಅಷ್ಟೊತ್ತಿಗಾಗಲೇ ಮೆಲ್ಲಗೆ ಸಂಜೆಗತ್ತಲು. ಹುಡುಗರಿಗೆ ಅರೆಗತ್ತಲೆಯಲ್ಲೇ ಆಟದ ಅಭ್ಯಾಸ. ಬೋರ್ಡಿನ 'ಭುಂ' ಎನ್ನುವ ಶಬ್ದವೇ ಸ್ಥಳಸೂಚಿ!

ತಮ್ಮ ಪ್ರಚಾರಕ್ಕಾಗಿ ಏರಿಯಾದ ಪುಡಿ ರೌಡಿಗಳು ಆಯೋಜಿಸುವ ಹೊನಲುಬೆಳಕಿನ ವಾಲಿಬಾಲ್ ಪಂದ್ಯಗಳಿರುತ್ತವಲ್ಲ? ವಾಲಿಬಾಲ್ ಜೊತೆಗೆ ಬಾಸ್ಕೆಟ್ ಬಾಲ್ ಪಂದ್ಯವನ್ನೂ ನಡೆಸುವಂತೆ ಬಿರಾದರ ಮಾಸ್ತರರು ಇಂಥವರ ಮನವೊಲಿಸಿದರು. ಮಾಸ್ತರರಿಗೆ ಅದೇನು ಹುಚ್ಚೋ! ಇಷ್ಟು ಪ್ರತಿಭೆಯುಳ್ಳ ಹುಡುಗರು ಕೇವಲ ಬಡತನದಿಂದಾಗಿ ಕೊಳೆಯಬಾರದು ಎಂಬುದು ಅವರ ಯೋಚನೆ. ಆಟದ ನೆಪದಲ್ಲಾದರೂ ಹುಡುಗರು ಸ್ಕೂಲುಗಳಿಗೆ ಅಂಟಿಕೊಂಡಿರಲಿ ಎಂಬುದು ಅದರ ಹಿಂದಿನ ಉದ್ದೇಶ. ಮುಂದೇನಾದರೂ ಹುಡುಗರು ಗೆಲ್ಲತೊಡಗಿದರೆ ಅದರಿಂದಾಗಿ ಬರುವ ಚೂರುಪಾರು ದುಡ್ಡು ಈ ಮಕ್ಕಳಿಗೆ ಸಹಾಯವಾದೀತೆಂಬ ದೂರದ ಆಸೆ. ಹಾಗಾಗಿ ತಮ್ಮದೇ ಖರ್ಚಿನಲ್ಲಿ ಹುಡುಗರನ್ನು ದೂರದ ಊರಿನ ಸ್ಪರ್ಧೆಗಳಿಗೂ ಕರೆದೊಯ್ಯತೊಡಗಿದರು. ಈ ಮಧ್ಯೆ ಅಂಕೋಲಾದ ಬೆಲೇಕೇರಿ ಬಂದರಿಗೆ ಬಂದು ಬೀಳುವ ಗಣಿ ಧೂಳಿನ ದೆಸೆಯಿಂದಾಗಿ, ಪುಡಿ ರೌಡಿಗಳ ಕೈಯಲ್ಲಿ ದುಡ್ಡು ಓಡಾಡತೊಡಗಿ, ಹೊನಲುಬೆಳಕಿನ ಪಂದ್ಯದ ಬಹುಮಾನದ ಮೊತ್ತ ಇಪ್ಪತ್ತು ಸಾವಿರದವರೆಗೂ ಏರಿ, ಗಣಪತಿ ನಾಯ್ಕನ ಜೊತೆ ಇನ್ನೂ ಏಳೆಂಟು ಜನ ಕಾಲೇಜು ಮೆಟ್ಟಿಲು ಹತ್ತುವಂತಾಯ್ತು. ಆದರೂ ಬದುಕು ಸಾಗಿಸಲು ಅಷ್ಟು ಸಾಕೆ? ತುಂಬ ಅತಂತ್ರದ ಸಂಪಾದನೆಯ ನಡುವೆ ಒಂದು ಡಿಗ್ರಿಯನ್ನಾದರೂ ಸಂಪಾದಿಸಬೇಕೆಂಬುದು ಇನ್ನೂ ಮರೀಚಿಕೆಯೇ. ಮೊದಲು ಹುಂಬರಂತೆ, ಬಾಸ್ಕೆಟ್ ಬಾಲ್ ಹುಚ್ಚಿಗೆ ಹೈಸ್ಕೂಲು ಮುಂದುವರಿಸಿದ್ದ ಹುಡುಗರಿಗೆ, ಈಗ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ, 'ಡಿಗ್ರಿ ಗಳಿಸುವುದು' ತಮ್ಮ ಜೀವನಕ್ಕೆ ಎಂಥ ತಿರುವನ್ನು ತರಬಲ್ಲುದೆಂಬುದರ ಸುಳಿವು ಹತ್ತಿತು. ಬಿರಾದರ್ ಮಾಸ್ತರರು ಬಯಸಿದ್ದೇ ಅದು! ಒಮ್ಮೆ ವಿದ್ಯೆಯ ರುಚಿ ಹತ್ತಿದ ಮನುಷ್ಯ ತನ್ನ ದಾರಿ ತಾನೇ ಕಂಡುಕೊಳ್ಳಬಲ್ಲ! ಒಂದು ಕಾಲದಲ್ಲಿ ಬಾಸ್ಕೆಟ್ ಬಾಲಿನ ಆಸೆಗಾಗಿ ವಿದ್ಯೆ ಕಲಿಯಲು ಬಂದ ಹುಡುಗರು ಇವತ್ತು ವಿದ್ಯೆ ಕಲಿಯುವ ಆಸೆಗಾಗಿ ಬಾಸ್ಕೆಟ್ ಬಾಲ್ ಆಡತೊಡಗಿದರು!

ಹಾಗೆ ಬಾಸ್ಕೆಟ್ ಬಾಲ್ ಹಿಡಿದ ಅಂಕೋಲಾದ ಬಡಹುಡುಗರು ಬೆಂಗಳೂರಿನ ಪಂದ್ಯಾವಳಿಯವರೆಗೆ ಬಂದು ಮುಟ್ಟಿದರು. ಈ ಸಾರಿಯ ಬಸ್ ಚಾರ್ಜೂ ಬಿರಾದರ್ ಮಾಸ್ತರರದೇ.

ಮೈಕ್ ಹಿಡಿದ ಪ್ರಿನ್ಸಿಪಾಲರು ಅವತ್ತು ನೆರೆದಿದ್ದರ ಉದ್ದೇಶವನ್ನೂ, ಪಂದ್ಯದ ನಿಯಮವನ್ನೂ ಹೇಳತೊಡಗಿದರು. ಗಣಪತಿ ನಾಯ್ಕನಿಗೆ ಕೊನೆಯ ಕ್ಷಣದಲ್ಲಿ ಸಣ್ಣಗೆ ನಡುಕ ಶುರುವಾಗತೊಡಗಿತು. ಆತ ಬೆವುರುತ್ತಿರುವುದನ್ನು ಗಮನಿಸಿದ ಬಿರಾದರ ಮಾಸ್ತರರು ಆತಂಕಗೊಂಡರು. ಪ್ರಿನ್ಸಿಪಾಲರ ಆತ್ಮವಿಶ್ವಾಸ ಯಾಕೋ ಅಸಹಜವೆನಿಸಿ ಬಿರದಾರ ಮಾಸ್ತರರಿಗೆ ತಾವಿದಕ್ಕೆ ಒಪ್ಪಬಾರದಿತ್ತೇನೋ ಅನಿಸತೊಡಗಿತು. ಗಣಪತಿ ನಾಯ್ಕ ಸೋತಿದ್ದಕ್ಕೆ ಹುಡುಗರು ವಿನಾಕಾರಣ ಧೃತಿಗೆಟ್ಟರೆ? ಬಿರಾದರ ಮಾಸ್ತರರು ಪ್ರಿನ್ಸಿಪಾಲರ ಬಳಿಗೆ ಧಾವಿಸಿ, 'ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳದೇ ಚೆಂಡನ್ನು ಎಸೆಯಬಹುದೇ?' ಎಂದು ವಿನಂತಿಸತೊಡಗಿದರು. ಅದೂ ಕೂಡ ಮೈಕಿನಲ್ಲಿ ಸಣ್ಣಗೆ ಕೇಳಿ ಬಂತು. ಸುತ್ತಲೂ ಕೂತ ಕಾಲೇಜು ಹುಡುಗರಲ್ಲಿ ಸಣ್ಣಗೆ ಗುಜು ಗುಜು ನಗು. ಅದನ್ನು ಕೇಳಿದ ಗಣಪತಿ ನಾಯ್ಕ ಇನ್ನೂ ಅಧೀರನಾದ. ಪ್ರಿನ್ಸಿಪಾಲರು ಬಿರಾದರ ಮಾಸ್ತರ ಮಾತಿಗೆ ಒಪ್ಪಲಿಲ್ಲ. ಬದಲಿಗೆ, 'ಆಯಿತು, ನಿಮ್ಮ ಹುಡುಗ ಕಣ್ಣಿಗೆ ಬಟ್ಟೆಕಟ್ಟಿಕೊಂಡೇ ಗೋಲು ಗಳಿಸಿದ್ದೇ ಆದಲ್ಲಿ ಅವನಿಗೊಬ್ಬನಿಗಲ್ಲ, ಇಡೀ ನಿಮ್ಮ ತಂಡದ ವಿದ್ಯಾಭ್ಯಾಸದ ಖರ್ಚನ್ನು ನಮ್ಮ ಸಂಸ್ಥೆ ಭರಿಸುತ್ತದೆ' ಎಂದು ಘೋಷಿಸಿದರು. ಹುಡುಗರಿಂದ ಚಪ್ಪಾಳೆ. ಗಣಪತಿ ನಾಯ್ಕ ಇನ್ನೂ ಗಾಬರಿಯಾದ. ಬಿರಾದರ ಮಾಸ್ತರರು ಕೈಚೆಲ್ಲಿ ತಮ್ಮ ಮೂಲೆಯ ಜಾಗಕ್ಕೆ ಹಿಂದಿರುಗಿ ಕೂತರು.

ಪ್ರಿನ್ಸಿಪಾಲರ ಮಾತು ಮುಗಿದು, ಪಂದ್ಯದ ಸೀಟಿ ಊದುತ್ತಿದ್ದಂತೆ ಇಡೀ ಕ್ರೀಡಾಂಗಣ ಸ್ತಭ್ದವಾಯಿತು. ಅದನ್ನು ಕೂಡ ಮೊದಲೇ ಪ್ಲಾನ್ ಮಾಡಲಾಗಿದೆ! ಗಣಪತಿ ನಾಯ್ಕ ಚೆಂಡು ಎಸೆಯುವುದಷ್ಟೇ ಮುಖ್ಯ! ನಂತರದ್ದೆಲ್ಲ ಟೀವಿಯವರಿಗೆ ಬೇಕಾದಂತೆ ನಡೆಯುತ್ತದೆ! ಸೀಟಿ ಊದಿದ ಮನುಷ್ಯನೇ ಗಣಪತಿ ನಾಯ್ಕನ ಬಳಿಗೆ ಬಂದು ಇನ್ನೊಂದು ಚೆಂಡನ್ನು ಬೋರ್ಡಿಗೆ ಎಸೆದು, 'ಬೋರ್ಡ್ ಅಲ್ಲಿದೆ' ಎಂದ. ಚೆಂಡು ಬೋರ್ಡಿಗೆ ಬಡಿದು 'ಭುಂ' ಎಂಬ ಶಬ್ದ ಹುಟ್ಟಿಸಿತು!

ಆತ ಅಲ್ಲಿಂದ ಹಿಂದಕ್ಕೆ ಸರಿಯುತ್ತ 'ರೆಡಿ?' ಎಂದು ಕೂಗಿ ಮತ್ತೊಂದು ಸೀಟಿ ಊದಿದ. ಹುಡುಗರಿಂದ 'ಥ್ರೀ....ಟೂ....ಒನ್, ಶೂಟ್' ಎಂಬ ಚೀತ್ಕಾರ.

ಅದು ಮುಗಿದ ಎರಡೇ ಕ್ಷಣಕ್ಕೆ ಗಣಪತಿ ನಾಯ್ಕ ಚೆಂಡನ್ನು ಎರಡು ಸಲ ನೆಲಕ್ಕೆ ಕುಟ್ಟಿ ಬೋರ್ಡಿನತ್ತ ಎಸೆದ. ಚೆಂಡು ಗಾಳಿಯಲ್ಲಿ ಬಿಲ್ಲಿನ ಆಕಾರದ ಪಥದಲ್ಲಿ ಬೋರ್ಡಿನತ್ತ ತೇಲಿ ಗೋಲಿನೊಳಗೆ ತೂರಿತು! ಎಲ್ಲರಿಗಿಂತ ಮೊದಲು ಎದ್ದು ನಿಂತಿದ್ದು ಬಿರಾದರ ಮಾಸ್ತರು!

10 comments:

ಸುಪ್ತವರ್ಣ said...

(ಪ್ರಿಯ ಓದುಗರೇ, ಈ ಕಥೆಯನ್ನು ಈ ಲಿಂಕಿನಿಂದ inspiration ಹೆಸರಲ್ಲಿ ಕದಿಯಲಾಗಿದೆ! http://sports.yahoo.com/blogs/post/Video-Prank-goes-awry-when-coach-hits-blindfold?urn=top,215799 ಪುರುಸೊತ್ತಿದ್ದರೆ, ಇದನ್ನೂ ನೋಡಿ, http://www.youtube.com/watch?v=3heqhwoqVTE)

sunaath said...

ಸುಪ್ತವರ್ಣ,
ಇದು ನಿಜವಾಗಿಯೂ inspire ಮಾಡುವಂತಹ ಕತೆ. ಕತೆಯ ಬೆಳವಣಿಗೆಯನ್ನು ಬಹಳ ಚೆನ್ನಾಗಿ ಮಾಡಿದ್ದೀರಿ. ಗಣಪತಿ ನಾಯ್ಕನು ಮೈದಾನದಲ್ಲಿ ನಿಲ್ಲುವ ‘ಈಗಿನ ಗಳಿಗೆ’ಯಿಂದ ಪ್ರಾರಂಭಿಸಿ, ಅವನ ‘ಲಗಾನ್’ದ ಕಾರಣಗಳನ್ನು ವಿವರಿಸಿ, ಕೊನೆಯಲ್ಲಿ ‘ಅಬ್ಬಾ!’ ಎನ್ನಿಸುವಂತೆ ಬರೆದಿದ್ದೀರಿ. ಕಾ^ಲೇಜಿನ ಪ್ರಿನ್ಸಿಪಾಲರು ‘ಎಪ್ರಿಲ್ ಫೂಲ್’ ಆಗಿದ್ದರಿಂದ ಸಂತಸವಾಯಿತು!

ಗೌತಮ್ ಹೆಗಡೆ said...

ಒಂದು ಸ್ಫೂರ್ತಿದಾಯಕ ಕಥೆ.ನಿರೂಪಣೆ ಸರಳವಾಗಿ ಓದಿಸಿಕೊಂಡು ಹೋಗುತ್ತೆ .ಚೆನ್ನಾಗಿದೆ ಸರ್.ಇದನ್ನ ಬ್ಲಾಗ್ ಗೇ ತಂದಿದ್ದಕ್ಕೆ ಥ್ಯಾಂಕ್ಸ್ ಸರ್.:)

Subrahmanya said...

ಸುಪ್ತವರ್ಣರೆ,
ಮೇ ತಿಂಗಳಲ್ಲಿ ಏಪ್ರಿಲ್ ಪೂಲಾ ಅಂದುಕೊಂಡೆ ..!. ಆದರೆ inspiration ಹೆಸರಲ್ಲಿ ಒಳ್ಳೆಯದನ್ನೇ ಬರೆದಿದ್ದೀರಿ. ಪೇಪರ್ ಹಾಕುವಾಗಿನ ತಪ್ಪದ ಗುರಿ, ಗಣಪತಿ ನಾಯ್ಕನನ್ನು ಗುರಿಮುಟ್ಟಿಸಿದ ಬಗೆಯಂತೂ ..ಚೆನ್ನಾಗಿತ್ತು. ಬಿರಾದಾರ ಮಾಸ್ತರಿಗೊಮ್ದು ಸಲಾಮು....’ಗಣಪತಿ’ಯನ್ನು inspire ಮಾಡಿದ್ದಕ್ಕೆ..!. Nice writeup.

Anonymous said...

ತುಂಬಾ ಚೆನ್ನಾಗಿರುವ ಕಥೆ ಬರೆದು, ನಮ್ಮನ್ನು ಫೂಲ್ ಮಾಡದೆ ಇರುವುದಕ್ಕೆ ತಮಗೆ ಅನಂತಾನಂತ ಧನ್ಯವಾದಗಳು.... :)

ಸೀತಾರಾಮ. ಕೆ. / SITARAM.K said...

Nice one.

Raghu said...

ಒಳ್ಳೆಯ ಕಥೆ..ಹೇಳಿರುವ ರೀತಿನು ಅಸ್ಟೆ ಚೆನ್ನಾಗಿದೆ.
ನಿಮ್ಮವ,
ರಾಘು.

ಮನಸು said...

ಸುಪ್ತವರ್ಣ,
ಎಂತಾ ಕಥೆ ನಮ್ಮುಂದಿಟ್ಟಿರಿ, ನಿಜವಾಗಲೂ ಎಲ್ಲರಿಗೂ ಸ್ಪೂರ್ತಿದಾಯಕ, ಬಿರಾದರ್ ಅಂತಹ ಮಾಸ್ತರರು ಎಷ್ಟೋ ಕಡೆ ಇರುತ್ತಾರೆ...ಭೇಷ್ ನಿಮ್ಮ ಕಥಾ ನಿರೂಪಣೆಗೆ ಚೆನ್ನಾಗಿ ಬರೆದಿದ್ದೀರಿ......ಓದಿಸಿಕೊಂಡು ಹೋಗುತ್ತೆ....

PaLa said...

ಉತ್ತಮ ಅನುವಾದ.. ಚೆನ್ನಾಗಿದೆ

Unknown said...

Super Super!!!!!