Monday, August 24, 2009

ನೀ ಮಾಯೆಯೋ, ನಿನ್ನೊಳು ಮಾಯೆಯೋ !

ಸೀತಾಪತಿ ಹಗಲುಕನಸುಗಾರ. ಕನಸನ್ನು ಅದೆಷ್ಟು ತನ್ಮಯತೆದಿಂದ ಅನುಭವಿಸುತ್ತಾನೆಂದರೆ, ಕನಸು ಕಾಣುತ್ತಿರುವಷ್ಟು ಹೊತ್ತು ಅದು ಕನಸೆಂದೇ ಅವನಿಗೆ ಅನ್ನಿಸುವುದಿಲ್ಲ. ಯಾವ ಕನಸೂ ನಿಜವಾಗಲೆಂದು ಅವನು ಬಯಸಿಲ್ಲ. ಹೇಗಿದ್ದರೂ ಅವು ನಿಜವಾಗುವಂಥ ಕನಸುಗಳೇ ಅಲ್ಲವಲ್ಲ !
ಒಮ್ಮೆ ಆತ ಕ್ರಿಕೆಟ್ ಆಟಗಾರ. ಸುಮ್ಮನೆ ಅಂತಿಂಥ ಆಟಗಾರನಲ್ಲ. ಆತ ಫೀಳ್ಡಿಗಿಳಿದನೆಂದರೆ ಒಂದು ಚೆಂಡೂ ಬಿಡದಂತೆ ಸಿಕ್ಸರುಗಳ ಸುರಿಮಳೆ. ನಡುವೆ ಬೇಕೆಂದರೆ ಬೌಂಡರಿ. ಔಟಾದದ್ದು ಒಂದೋ ಎರಡೋ ಸಲ ಅಷ್ಟೇ. ಹೀಗಿರುವಾಗ ಅವನ ರೆಕಾರ್ಡುಗಳು ಯಾವವೂ ಹೋಲಿಕೆಯಿಲ್ಲದಂತವು. ಟೀಮು ತುಂಬಾ ಸಂಕಷ್ಟದಲ್ಲಿದ್ದಾಗ ಬಿಟ್ಟರೆ ಸೀತಾಪತಿ ಬೌಲಿಂಗ್ ಮಾಡಿಲ್ಲ. ಬೌಲಿಂಗ್ ಎಂದರೆ ಸೀತಾಪತಿಗೆ ಅಷ್ಟಕ್ಕಷ್ಟೇ. ಅಷ್ಟಕ್ಕೂ ತಾನು ಇಷ್ಟೊಂದು ರನ್ನುಗಳನ್ನು ಪೇರಿಸುವಾಗ ಟೀಮು ಸಂಕಷ್ಟಕ್ಕೊಳಗಾಗುವ ಪರಿಸ್ಥಿತಿ ಹೇಗೆ ಬರಲು ಸಾಧ್ಯವೆಂಬ ಅನುಮಾನ ಒಮ್ಮೊಮ್ಮೆ ಬರುತ್ತಾದರೂ, ಅದರ ಬಗ್ಗೆ ಅಷ್ಟೊಂದು ಯೋಚಿಸಲು ಹೋಗುವುದಿಲ್ಲ. ಶರ್ಟಿನ ಹಿಂದೆ 'ಸೀತಾಪತಿ' ಎಂದಿರಬೇಕಾ, ಇಲ್ಲ ಸುಮ್ಮನೇ 'ಪತಿ' ಎಂದಿರಬೇಕಾ ಎಂದು ಒಮ್ಮೊಮ್ಮೆ ಯೋಚನೆಗೆ ಬಿದ್ದುಬಿಡುತ್ತಾನೆ. ಅಂಥ ಅರಿಭಯಂಕರ ಆಟಗಾರನೆಂದ ಮೇಲೆ ಏನು ಬರೆದುಕೊಂಡರೂ ಅದು ಜನಪ್ರಿಯವೇ ಆಗುತ್ತದೆಂಬ ಅಭಿಪ್ರಾಯಕ್ಕೆ ಈಗ ಬಂದಿದ್ದಾನೆ. ತೆಂಡೂಲ್ಕರ್ ಎಂಬ ಹೆಸರು ಏನು ಚೆನ್ನಾಗಿದೆ ? ಆದರೂ ಜನ ನೋಡುವುದಿಲ್ಲವೇ ? ಸೀತಾಪತಿ ಕ್ರಿಕೆಟ್ ಆಟಗಾರನಾಗುವ ಕನಸು ಭಾರತ ಸೋತ ದಿನ ಜಾಸ್ತಿ.


ಇಂಥದ್ದೇ ಅತಿರೇಕಗಳನ್ನು ಆತ ತಾನು ಐ.ಎ.ಯೆಸ್ಸು ಆಫೀಸರಾದಂತೆ ಕನಸು ಕಂಡು ಊಹಿಸಿಕೊಳ್ಳುತ್ತಾನೆ. ತನ್ನಿಂದಾಗಿ ದೇಶವೇ ಉದ್ದಾರವಾದಂತೆ! ಒಬ್ಬ ಆಫೀಸರು ಇಡಿ ದೇಶ ಉದ್ದಾರ ಮಾಡಬಹುದೆಂದು ಸೀತಾಪತಿಗೆ ಯಾರು ಹೇಳಿದರೋ? ಸಾಮಾನ್ಯವಾಗಿ ಭಯೋತ್ಪಾದಕರ ದಾಳಿಯಾದ ದಿನ ಇಲ್ಲವೇ ಹೆಲ್ಮೆಟ್ ಇಲ್ಲದೆ ಓಡಿಸಿದ್ದಕ್ಕಾಗಿ ಟ್ರಾಫಿಕ್ ಪೋಲೀಸು ನಿಲ್ಲಿಸಿ ನೂರು ರೂಪಾಯಿ ಕಿತ್ತ ದಿನ ಈ ಕನಸು ಜಾಸ್ತಿ!


ಸೀತಾಪತಿ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬಡತನದಲ್ಲಿ. ಚಿಕ್ಕವನಿರುವಾಗಲೇ ತಂದೆ ತೀರಿಕೊಂಡರು. ತಂದೆಯಿರುವಷ್ಟು ದಿನ ಸ್ವಲ್ಪವಾದರೂ ನಿಯತ್ತಿನಿಂದ ಇದ್ದ ದಾಯಾದಿಗಳು, ನೆಂಟರಿಷ್ಟರು, ತಂದೆ ತೀರಿಕೊಳ್ಳುತ್ತಿದ್ದಂತೆ ಕಿತ್ತುಕೊಳ್ಳಬಹುದಾದದ್ದನ್ನೆಲ್ಲ ಸ್ವಲ್ಪವೂ ಕನಿಕರವಿಲ್ಲದೆ ಕಿತ್ತುಕೊಂಡರು. ತುಂಬಾ ಆಸ್ತಿಯಿತ್ತು ಅಂತಲ್ಲ, ಇವರದ್ದು ಅನ್ನುವಂತದ್ದನ್ನೂ ಅವರು ಬಿಡಲಿಲ್ಲ ಅಂತ ಅಷ್ಟೆ. ಅವನಿಗೂ ಅವನ ತಾಯಿಗೂ ಉಳಿದಿದ್ದು ಮುರುಕಲು ಮನೆಯೊಂದೇ. ಆ ಮನೆ ಇತರೇ ನಾಲ್ಕು ಮನೆಯೊಂದಿಗೆ ಸೂರು ಹಂಚಿಕೊಳ್ಳುತ್ತದೆ. ಮಧ್ಯೆ ಗೋಡೆಗಳು ಮಾತ್ರ ಮನೆಗಳನ್ನು ಪ್ರತ್ಯೆಕಿಸುವಂತಿವೆ. ತಾಯಿ ಏನೇ ಆದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಬದುಕುವ ಜೀವ. ಸೀತಾಪತಿಗೂ ಅದೇ ಸ್ವಭಾವ ಬಂದಿದೆ. ದುಡಿಮೆ ತಾಯಿಗೆ ಹೊಸದಲ್ಲ. ಮಗನಿಗೂ ಅದನ್ನೇ ಕಲಿಸಿದ್ದಾಳೆ. ಯಾವುದನ್ನೂ ಪ್ರತಿಭಟಿಸದೇ ಉಳಿದ ಸೀತಾಪತಿಯ ಮನಸ್ಸಿಗೆ ಕನಸೇ ಬಾಗಿಲು.


ಚಿಕ್ಕಂದಿನಿಂದಲೂ ತಾಯಿಯೊಂದಿಗೆ ಸೌದೆಗಾಗಿ ಕಾಡು ಸುತ್ತುತ್ತಿದ್ದ ಸೀತಾಪತಿಗೆ ಮುರುಗಲು ಹಣ್ಣೆಂದರೆ ತುಂಬ ಪ್ರೀತಿ. ಮೊದಮೊದಲು ಬರಿಯಾಗೇ ತಿನ್ನುತ್ತಿದ್ದ ಸೀತಾಪತಿಗೆ ಅದರಿಂದ ಜ್ಯೂಸ್ ತಯಾರಿಸಿಕೊಟ್ಟಿದ್ದು ಅವನ ತಾಯಿ. ಅದಕ್ಕೆ ಶೆಟ್ಟರ ಅಂಗಡಿಯಿಂದ ತಂದ ಸೋಡಾವನ್ನು ಸ್ವಲ್ಪ ಸೇರಿಸಿ, ಆಮೇಲೆ, ರುಚಿಗೆ ತಕ್ಕಂತೆ ಅನ್ನುತ್ತಾರಲ್ಲ, ಅಷ್ಟು ಉಪ್ಪು ಬೆರೆಸಿ ಕುಡಿದಿದ್ದು ಮಾತ್ರ ಸೀತಾಪತಿ. ಕ್ರಮೇಣ ಸೀತಾಪತಿ ತಾನೇ ಪೂರ್ತಿ ಜ್ಯೂಸ್ ತಯಾರಿಸುವುದನ್ನು ಕಲಿತ. ಈತ ದಿನವೂ ಕುಡಿಯುತ್ತಿದ್ದ ಈ ಮಿಶ್ರಣವನ್ನು ಒಮ್ಮೆ ಕುತೂಹಲಕ್ಕೆಂದು ಕುಡಿದ ಶೆಟ್ಟರು ದಂಗಾದರು. ಅದನ್ನು ಹೇಗೆ ತಯಾರಿಸುವುದೆಂದು ಅವನ ಬಳಿ ತಿಳಿದುಕೊಂಡರು. ಏನೇ ತಿಪ್ಪರಲಾಗ ಹಾಕಿದರೂ ಸೀತಾಪತಿಯ ಜ್ಯೂಸಿನ ಟೇಸ್ಟು ಅದಕ್ಕೆ ಬರಲೇ ಇಲ್ಲ. ಇಷ್ಟು ಚಿಕ್ಕ ವಿಷಯ ಕೂಡಾ ಒಮ್ಮೊಮ್ಮೆ ಹೇಗೆ ಒಬ್ಬರಿಗೆ ಮಾತ್ರ ಕಲೆಯಾಗಿ ಒಲಿಯುತ್ತದೆಂದು ಶೆಟ್ಟರಿಗೆ ಆಶ್ಚರ್ಯವಾದದ್ದು ಸುಳ್ಳಲ್ಲ. ಕೊನೆಗೆ ಸೋತ ಶೆಟ್ಟರು, ತಮ್ಮ ಮಗಳ ಮದುವೆಗೆ ಇದೇ ಪಾನೀಯವನ್ನು ಹಂಡೆಗಟ್ಟಲೆ ತಯಾರಿಸಿಕೊಡುವಂತೆ ನಿಧಾನಕ್ಕೆ ಸೀತಾಪತಿಯನ್ನು ಒಪ್ಪಿಸಿದರು. ಅದಕ್ಕೆ ಸ್ವಲ್ಪ ಹಣವನ್ನೂ ಕೊಟ್ಟರು. ಮುರುಗಲು ಹಣ್ಣಿಗೆ ಇಂಗ್ಲಿಷಿನಲ್ಲಿ garcinia indica ವೆನ್ನುತ್ತಾರೆನ್ನುವುದನ್ನು ಸೀತಾಪತಿಗೆ ಹೇಳಿಕೊಟ್ಟಿದ್ದು ಇದೇ ಶೆಟ್ಟರ ಮಗ, ಎರಡನೇ ಪೀಯುಸಿ ಪಾಸಾಗದೆ ಅಪ್ಪನ ಜೊತೆ ಕೆಲಸ ಮಾಡುವ ಚಿಕ್ಕಶೆಟ್ಟಿ. ಶೆಟ್ಟರ ಮಗಳ ಮದುವೆಯಲ್ಲಿನ ಸೀತಾಪತಿಯ ಮುರುಗಲು ಪಾನಕ ಶೆಟ್ಟರ ಮಗಳ ಮೈಮೇಲಿನ ಒಡವೆಗಿಂತಲೂ ಜಾಸ್ತಿ ಪ್ರಚಾರ ಪಡೆಯಿತು. ಸೀತಾಪತಿ ಕೋಕ್ ಜ್ಯೂಸ್ ತಯಾರಕನಾಗಿ ಬೆಳೆದದ್ದು ಹೀಗೆ! ಆತ ಬಂಡವಾಳವನ್ನಾಗಿ ಬಳಸಿದ್ದು ಶೆಟ್ಟರು ಕೊಟ್ಟ ಅದೇ ಹಣವನ್ನು! ಒಬ್ಬರು ಯಶಸ್ವಿಯಾದ ಮೇಲೆ ಅದು ತುಂಬಾ ಸುಲಭ ಎಂದು ಹಲವರಿಗೆ ಅನ್ನಿಸುತ್ತದಲ್ಲ? ಹಾಗೆ ತುಂಬಾ ಜನ ಕೋಕ್ ಉದ್ಯಮವನ್ನು ನಡೆಸಲು ನೋಡಿದರಾದರೂ ಸೀತಾಪತಿಯ ಮಿಶ್ರಣದ ರುಚಿ ಯಾರಿಂದಲೂ ತರಲು ಸಾಧ್ಯವಾಗಲಿಲ್ಲ. ಒಂದಿಬ್ಬರು ಯಶಸ್ವಿಯಾದರೂ ಅವರಲ್ಲಿ ಸೀತಾಪತಿಗಿರುವ ವ್ಯಾಪಾರೀ ತಾಳ್ಮೆಯಿರದೆ ಅವರು ಆರಂಭ ಶೂರರೆನಿಸಿಕೊಳ್ಳಬೇಕಾಯಿತು. ಇದೆಲ್ಲಾ ಬೆಳವಣಿಗೆಗಳಿಂದ ಎಲ್ಲರಿಗಿಂತಲೂ ಹೆಚ್ಚು ಖುಷಿಪಟ್ಟವಳೆಂದರೆ ಸೀತಾಪತಿಯ ತಾಯಿ. ಶೆಟ್ಟರು, ಸೀತಾಪತಿಗೆ ವ್ಯಾಪಾರ ನಡೆಸಲು ತಾವೇ ಪ್ರೇರಣೆ ಎಂದೂ, ಆತ 'ನಮ್ಮ ಹುಡುಗ' ಎಂಬ ವಿಶೇಷಣವನ್ನೂ ಹಚ್ಚಿ ಆಗಾಗ ಜನರೆದುರು ಹೇಳಿಕೊಂಡು ತಾವೇ ಖುಷಿಪಡುತ್ತಾರೆ. ಸೀತಾಪತಿ ಇಲ್ಲವೆನ್ನಲು ಹೋಗುವುದಿಲ್ಲ. ಇಷ್ಟೆಲ್ಲಾ ಯಶಸ್ಸು ಸಿಕ್ಕ ಮೇಲೆ ಸೀತಾಪತಿಯ ಕನಸು ಕಾಣುವ ಹವ್ಯಾಸ ಕೊನೆಗೊಳ್ಳಬೇಕಿತ್ತು. ಚಿಕ್ಕಂದಿನಿಂದಲೂ ಬೆಳೆದುಕೊಂಡು ಬಂದ ಹವ್ಯಾಸ ಈಗ ಅದೇನೋ ಆತನ ಸ್ವಭಾವವೇ ಆಗಿ ಹೋದಂತಿತ್ತು. ಮರೆತು ಹೋಗಲು ಅದು ಒಂದೆರಡು ದಿನದಿಂದ ಇರುವಂಥದ್ದಲ್ಲವಲ್ಲ ? ಸೀತಾಪತಿಗಾಗಲೀ ಇತರರಿಗಾಗಲೀ ಇದರಿಂದ ಯಾವತ್ತೂ ತೊಂದರೆಯಾದದ್ದಿಲ್ಲ, ತನ್ನಷ್ಟಕ್ಕೆ ತಾನೇ ನಕ್ಕು ಒಮ್ಮೊಮ್ಮೆ ಪಕ್ಕದ ಮನೆಯ ಮೀನಾ ಆಂಟಿಯೆದುರು ನಗೆಪಾಟಿಲಿಗೀಡಾದದ್ದು ಬಿಟ್ಟರೆ! ಸೀತಾಪತಿ ವ್ಯಾಪಾರ ನಿಮಿತ್ತ ಸಿಟಿಗೆ ಹೋಗತೊಡಗಿದಂತೆ ಅವನ ಕನಸೂ ಅಧುನಿಕತೆಯ ಟಚ್ ಪಡೆಯತೊಡಗಿತು. ಕನಸಿಗೆ ಕ್ರಿಕೆಟ್ಟೂ, ಐಯೆಸ್ಸೂ, ಇತರೆಯೂ ಸೇರತೊಡಗಿದವು.


ಹೀಗೇಯೇ ಒಂದು ದಿನ ಕಾಡಿನಿಂದ ಸೀತಾಪತಿ ಒಬ್ಬನೇ ಬರುತ್ತಿರುವಾಗ ಪಕ್ಕದ ಪೊದೆಯಲ್ಲಿ ಯಾರೋ ಸರಿದಾಡಿದಂತಾಯಿತು. ದಿಟ್ಟಿಸಿ ನೋಡಿದ ಸೀತಾಪತಿಗೆ ಕಂಡೂ ಕಾಣದಂತೆ ಕಂಡಿದ್ದು, ಕಾಣಬಾರದ ಸ್ಥಿತಿಯಲ್ಲಿದ್ದ ಪಕ್ಕದೂರಿನ ಮಧ್ಯವಯಸ್ಕರೊಬ್ಬರು ಮತ್ತು ಅವರ ಹೆಣ್ಣಾಳು. ಸ್ವಲ್ಪ ಹೆಚ್ಚೇ ದಿಟ್ಟಿಸಿದ ಸೀತಾಪತಿಯನ್ನು ಅವರಿಬ್ಬರ ನಾಲ್ಕು ಕಣ್ಣಗಳು, ಅವನ ಪ್ರತಿಕ್ರಿಯೆಯನ್ನು ಅಳೆಯುವವರಂತೆ, ಅಂಥ ಅಲೌಕಿಕ ಸ್ಥಿತಿಯಲ್ಲೂ ಒಮ್ಮೆ ದಿಟ್ಟಿಸಿ ನೋಡಿ, ಕ್ಷಣಾರ್ಧದಲ್ಲಿ ಅವರೇ ದಡಬಡಿಸಿ, ಗಾಬರಿಯಿಂದ, ಅರ್ಧಕ್ಕೇ ಬಿಟ್ಟು ಓಡಿಬಿಟ್ಟರು. ಎರಡೇ ಕ್ಷಣದಲ್ಲಿ ನಡೆದ ಈ ಘಟನೆಯಿಂದ ಅವರಿಗಿಂತ ಹೆಚ್ಚು ಗಾಬರಿಗೊಳಗಾದದ್ದು ಸೀತಾಪತಿ. ಏಕೆಂದರೆ ಇಂಥ ಅನುಭವ ಅವನಿಗೆ ಆದದ್ದು ಮೊದಲನೇ ಸಲ! ಸ್ವಲ್ಪ ಹೊತ್ತಾದ ಮೇಲೆ ಸೀತಾಪತಿಗೆ, ಅವರು ಅರ್ಧಕ್ಕೇ ಹೋಗಿದ್ದು ಪಿಚ್ಚೆನಿಸತೊಡಗಿತು. ಎಲ್ಲರಿಗೂ ತಿಳಿಯಲ್ಪಟ್ಟ ಮಾಯೆಯಿಂದ ತಾನು ಮಾತ್ರ ಹೊರಗುಳಿದಂತೆ ಅವನಿಗೆ ಅನಿಸತೊಡಗಿತು. ಹಾಗೆ ಒಮ್ಮಿಂದೊಮ್ಮೆಲೇ ನೋಡುವ ಬದಲು ತಾನು ಅಡಗಿ ಕುಳಿತು ನೋಡಿದ್ದರೆ ಚೆನ್ನಾಗಿತ್ತೆಂಬ ಯೋಚನೆ ಅವನಿಗೆ ಬಂತು. ಅಷ್ಟಕ್ಕೂ ಅಲ್ಲಿ ಅಡಗಿ ಕುಳಿತು ನೋಡುವ ಅವಕಾಶವೇ ಇರಲಿಲ್ಲವಲ್ಲ? ತಾನು ದಿಟ್ಟಿಸಿ ನೋಡಿದ ಮೇಲೆ ತಾನೇ ತನಗೆ ಅದೇನೆಂದು ತಿಳಿದಿದ್ದು? ಅಷ್ಟರಲ್ಲಾಗಲೇ ಅವರಿಬ್ಬರೂ ತನ್ನನ್ನು ನೋಡಿಯಾಗಿತ್ತಲ್ಲ? ಅಡಗಿ ಕುಳಿತು ನೋಡುವುದಕ್ಕಿಂತಲೂ ಇನ್ನೇನಾದರೂ ಆಗಿದ್ದರೆ ಚೆನ್ನಾಗಿರುತ್ತಿತ್ತು. ಬಹುಶಃ ತಾನು ಮಾಯವಾಗುವ ಶಕ್ತಿಯನ್ನು ಹೊಂದಿದವನಾಗಿದ್ದರೆ ? ಹೌದು! ಅದೇ ಆಗಬೇಕಿತ್ತು ! ಮತ್ತೆ ಬೇಕಾದಾಗ ಪ್ರತ್ಯಕ್ಷವಾಗಿ ಬಿಡಬೇಕು. ಮಾಯವಾಗಿಯೇ ಇದ್ದು ಭೂತದಂತಾಗಿ ಬಿಡಲು ಅವನಿಗಿಷ್ಟವಿಲ್ಲ. ಸೀತಾಪತಿಗೆ ಮೊದಲ ಬಾರಿಗೆ ತನ್ನ ಕನಸು ನಿಜವಾಗಬೇಕೆಂದು ಅನಿಸತೊಡಗಿತು! ಅದರೊಂದಿಗೆ ಅವನ ಕನಸುಗಳ ಪಟ್ಟಿಗೆ ಹೊಸದೊಂದು ಕನಸು ಸೇರಿಕೊಂಡಿತು!


ಮೀನಾ ಆಂಟಿಯ ಮನೆಯೂ ಇವರ ಮನೆಯೂ ಇರುವುದು ಒಂದೇ ಸೂರಿನಲ್ಲಿ. ಮಧ್ಯೆ ಗೋಡೆಯೊಂದು ಇಬ್ಬರ ಮನೆಯನ್ನೂ ಪ್ರತ್ಯೇಕಿಸುತ್ತದೆ. ದಿನವೂ ಮೊದ್ದನಂತೆ ಮಲಗಿ ನಿದ್ರಿಸಿಬಿಡುತ್ತಿದ್ದ ಸೀತಾಪತಿ ಇವತ್ತು ನಿದ್ದೆ ಬರದೆ ಹೊರಳಾಡಿದ. ಮೊದಲ ಬಾರಿಗೆ ಗೋಡೆಯಾಚೆಯಿಂದ ಸೀತಾಪತಿಗೆ, ಕೇಳಿಯೂ ಕೇಳಿಸದಂಥ, ಆದರೆ ಅದು ಇಂಥದ್ದೇ ಎಂದ ಊಹಿಸಬಹುದಾದ ಏದುಸಿರಿನ ಶಬ್ದಗಳು ಕೇಳಿಬರತೊಡಗಿದವು. ಮೀನಾ ಆಂಟಿ, ಬೇಡಿಕೊಳ್ಳುತ್ತಿದ್ದಾಳೋ, ಪ್ರೋತ್ಸಾಹಿಸುತ್ತಿದ್ದಾಳೋ ತಿಳಿಯದಂಥ ದನಿಯಲ್ಲಿ ಗಂಡನಿಗೆ ಪಿಸುದನಿಯಲ್ಲಿ ಉಸುರಿದ್ದೂ, ಅವು ಏನೆಂದು ಸೀತಾಪತಿಗೆ ಕೇಳಿಸದಿದ್ದೂ, ಅವುಗಳ ಮಧ್ಯೆಯೇ ತಾಳಬಧ್ಧವಾದ ಏದುಸಿರುಗಳೂ ಸೇರಿ ಸೀತಾಪತಿಯ ಬೆಂಕಿಗೆ ತುಪ್ಪ ಸುರಿದಂತಾಯ್ತು. ಅದರೊಂದಿಗೆ ಕ್ರಮೇಣ ಮಂಚದ ದನಿಯೂ ಪ್ರಾರಂಭವಾಗಿ, ಎಲ್ಲ ಶಬ್ದಗಳೂ ಜೋರಾಗತೊಡಗಿ ಕೊನೆಗೊಮ್ಮೆ ಏನೂ ನಡೆದಿಲ್ಲವೆಂಬಂತೆ ನಿಶ್ಯಬ್ದವಾಗಿ ಹೋಯಿತು. ತನ್ನನ್ನು ಮಾತ್ರ ಹೊರಗಿಟ್ಟು, ಜಗತ್ತು ಎಲ್ಲೋ ನಡೆದಂತೆ ಸೀತಾಪತಿಗೆ ಭಾಸವಾಯಿತು. ಇದೇ ಸಮಯದಲ್ಲಿ ಸೀತಾಪತಿಗೆ, ತನ್ನಷ್ಟಕ್ಕೆ ತಾನೇ ನಗುವಾಗ ಮೀನಾ ಆಂಟಿ ನೋಡಿ ನಕ್ಕಿದ್ದು ನೆನಪಿಗೆ ಬಂದು ಮೈಯೆಲ್ಲ ಉರಿದು ಹೋಯಿತು. ಈಗಿಂದೀಗಲೇ ಮಾಯವಾಗಿ ಗೋಡೆಯಾಚೆ ನಿಂತು ಮೀನಾ ಆಂಟಿಯ ರಹಸ್ಯಗಳನ್ನೂ ತಾನು ಖುದ್ದು ನೋಡಿ ಸೇಡು ತೀರಿಸಿಕೊಳ್ಳಬೇಕೆಂದು ಬಲವಾಗಿ ಅನಿಸತೊಡಗಿತು.


ಬೆಳಿಗ್ಗೆ ಎಂದಿಗಿಂತ ಸ್ವಲ್ಪ ತಡವಾಗಿಯೇ ಎದ್ದ ಸೀತಾಪತಿಗೆ ಹಿಂದಿನ ದಿನದ ಘಟನೆಗಳು ಯಾವವೂ ಈಗ ಅಷ್ಟು ಗಾಢವಾಗಿ ಕಾಡದಿದ್ದರೂ, ತನ್ನ ಮಾಯಾವಾಗುವ ಕನಸಿಗೆ ಹೊಸ ರೂಪ ಬರತೊಡಗಿತು. ತಾನು ಮಾಯವಾದರೆ ಈ ಬಾರಿ ಎಂದಿನಂತೆ ದೇಶೋದ್ಧಾರದ ಕೆಲಸವನ್ನೇನೂ ಮಾಡುವುದಿಲ್ಲ. ಸ್ವಲ್ಪ ದಿನದ ಮಟ್ಟಿಗೆ ಅದೂ ಇದೂ ಮಾಡಿಯೇನಾದರೂ ಈ ಹಳ್ಳಿ ಬಿಟ್ಟು ತನ್ನ ಕಾರ್ಯಕೇತ್ರ ಹೊರಗೆ ಹೋಗಲಾರದು! ಇದೇ ಹಳ್ಳಿಯಲ್ಲಿ ಯಾರ್ಯಾರ ಮನೆಯಲ್ಲಿ ಯಾರ್ಯಾರು ಇರಬಾರದ ವೇಳೆಯಲ್ಲಿ ಇರುತ್ತಾರೆಂದು ಕಂಡುಕೊಂಡು ತಮಾಷೆ ನೋಡುತ್ತೇನೆ ಅಂದುಕೊಂಡ. ಹಿಂದೆಯೇ ಕಿಸಕ್ಕೆಂದು ನಕ್ಕ. ಯೋಚಿಸುತ್ತಲೇ ಹಲ್ಲುಜ್ಜಲು ಶುರು ಮಾಡಿದ.


ಸೀತಾಪತಿ ಇನ್ನೂ ಎದ್ದಿಲ್ಲವೆಂದುಕೊಂಡು, ಅವನಿಗಾಗಿ ಕಾದು, ಕೊನೆಗೆ ಎಬ್ಬಿಸಲೆಂದು ಬಂದ ಅವನ ತಾಯಿ, ಹಾಸಿಗೆ ಖಾಲಿಯಿರುವುದನ್ನು ನೋಡಿ, ಬೆಳಗ್ಗಿನ ತಿಂಡಿಗೆ ತಯಾರಿ ನಡೆಸತೊಡಗಿದಳು. ಆಕೆಗೆ ಯಾವತ್ತೂ ಮಗನನ್ನು ಬಿಟ್ಟು ಆಹಾರ ಸೇರುವುದಿಲ್ಲ. ಸೀತಾಪತಿ ಸಿಟಿಗೆ ಹೋದ ದಿನ ಮಧ್ಯಾಹ್ನ ಮಾತ್ರ ಆಕೆ ಒಬ್ಬಳೇ ಊಟದ ಶಾಸ್ತ್ರ ಮಾಡಿ ಏಳುತ್ತಾಳೆ.


ಮುಖ ತೊಳೆದು ಒಳಗೆ ಬಂದ ಸೀತಾಪತಿ ಪ್ಲೇಟೆತ್ತಿಕೊಂಡು, "ಇವತ್ತಿನ ತಿಂಡಿಗೆ ಏನಮ್ಮ?" ಎಂದ. "ಉಪ್ಪಿಟ್ಟು ಕಣೋ", ಎನ್ನುತ್ತಲೇ ದನಿ ಬಂದ ದಿಕ್ಕಿಗೆ ತಿರುಗಿದ ಆಕೆಯ ಮುಖ ಕಪ್ಪಿಟ್ಟಿತು. "ಏನಮ್ಮ? ಏನಾಯಿತು?" ಎನ್ನಲು ಹೋದ ಸೀತಾಪತಿಗೂ ಎದುರಿನ ಪಾತ್ರೆ ಸ್ಟ್ಯಾಂಡಿನ ಲೋಹದ ಪ್ರತಿಫಲನದಲ್ಲಿ ತನ್ನ ಕೈಯಲ್ಲಿದ್ದ ಪ್ಲೇಟು ಮಾತ್ರ ಗಾಳಿಯಲ್ಲಿ ನಿಂತಿದ್ದು ಕಾಣಿಸಿ ರಕ್ತವೆಲ್ಲ ಮುಖಕ್ಕೆ ನುಗ್ಗಿದಂತಾಗಿ ಮಾತಿಲ್ಲದೇ ನಿಂತ. ಅಂಥ ಚಳಿಗಾಲದ ಬೆಳಗಿನ ಥಂಡಿಯಲ್ಲೂ ಸೀತಾಪತಿ ನಡುಗುತ್ತಲೇ ಬೆವರತೊಡಗಿದ!

1 comment:

Umesh Balikai said...

ಕಥೆ ತುಂಬಾ ಕುತೂಹಲಕಾರಿಯಾಗಿದೆ.

- ಉಮೇಶ್