Saturday, September 5, 2009

ಗಿಳಿಯು ಪಂಜರದೊಳಿಲ್ಲ !

ಆಘಾತಗಳೆಲ್ಲವೂ ಯಾಕೆ ಅನಿರೀಕ್ಷಿತವಾಗಿರುತ್ತವೋ? ಅನಿರೀಕ್ಷಿತವಾಗಿರದಿದ್ದರೆ ಅದನ್ನು ಆಘಾತ ಎನ್ನುವುದಿಲ್ಲವೇ? ಅಂತೂ ಅವತ್ತಿನ ಮಟ್ಟಿಗೆ ನನ್ನ ಗ್ರಹಚಾರ ಸರಿ ಇರಲಿಲ್ಲ.

ಬೇಸಿಗೆಯಲ್ಲಿ ಮಧ್ಯಾಹ್ನ ಮಾತ್ರ ಬಿಸಿಲು ಬೀಳುವ, ಮಳೆಗಾಲದಲ್ಲಿ ಒಂದು ಕ್ಷಣವೂ ಮಳೆ ನಿಲ್ಲದ, ಅಚ್ಚ ಹಸಿರಿನ ಬೆಟ್ಟಗಳ ನಡುವಿನ ಹಳ್ಳಿ ನಮ್ಮದು. ವರ್ಷದಲ್ಲಿ ಹೆಚ್ಚಿನ ಕಾಲ ಬೆಳಿಗ್ಗೆ ಹತ್ತು ಘಂಟೆಯವರಿಗೂ ಮಂಜು ಮುಸುಕಿರುತ್ತದೆ. ಅಡಿಗೆಗೆ ಗೋಬರ್ ಗ್ಯಾಸ್ ಬಳಸುವಷ್ಟು ಮುಂದುವರಿದ, ಆದರೆ ಸ್ನಾನದ ಒಲೆಗೆ ಇನ್ನೂ ಉರುವಲನ್ನೇ ಬಳಸುವಷ್ಟು ಹಿಂದುಳಿದಿರುವ ಊರು. ಅಚ್ಚ ಹಸಿರಿನ ಹಿನ್ನೆಲೆಗೆ, ತೆಳ್ಳಗೆ ಮುಸುಕಿದ ಮಂಜಿನ ಮಧ್ಯೆ, ಉರುವಲಿನಿಂದ ಏಳುವ ನೀಲಿ ಹೊಗೆ ಸೇರಿ ಪ್ರತಿ ಮುಂಜಾನೆ ಒಂದು ಅದ್ಭುತ ದೃಶ್ಯ ಸೃಷ್ಟಿಯಾಗುತ್ತದೆ. ಊರಿನ ಹಿಂದೆ ಒಂದು ಮೈಲಿ ದೂರದಲ್ಲಿ ಬಸ್ಸಿನ ರಸ್ತೆಯೂ, ಊರಿನ ಮುಂದೆ ಒಂದು ಮೈಲಿ ದೂರದಲ್ಲಿ ರೈಲ್ವೆ ಹಳಿಯೂ, ನಿಲ್ದಾಣವೂ ಇದೆ. ಇರುವ ಹತ್ತೇ ಮನೆಗಳಲ್ಲಿ ಇಪ್ಪತ್ತು ಕಾದಂಬರಿಗಳಿಗಾಗುವಷ್ಟು ತರಹೇವಾರಿ ಪಾತ್ರಗಳಿವೆ.

ಊರಿನ ಮೊದಲಿನಲ್ಲಿ ಇದ್ದಿದ್ದು ಶಂಕರ ಶರ್ಮರ ಮನೆ. ಮನೆಯಷ್ಟೇ ಅಲ್ಲ, ಅವರೂ ಊರಲ್ಲಿ ಮೊದಲಿಗರು. ದೊಡ್ಡ ಕುಳ. ಶಂಕರ ಎಂದು ಹೆಸರಿಟ್ಟವರಿಗೆ ಮೊದಲೇ ಗೊತ್ತಿತ್ತೋ ಏನು ಕತೆಯೋ, ಒಟ್ಟಿನಲ್ಲಿ ಭಯಂಕರ ಸಿಟ್ಟಿನ ಮನುಷ್ಯ. ಅಪಾಯವೆಂದರೆ ಆತ ಸಿಟ್ಟನ್ನು ತೋರಿಸಿಕೊಳ್ಳುವುದಿಲ್ಲ. ಅದಕ್ಕಿಂತಲೂ ಅಪಾಯಕಾರಿಯೆಂದರೆ ಅವರ ತಮ್ಮಂದಿರು. ತಮ್ಮಂದಿರಿಗೆ ಮಿದುಳೇ ಇಲ್ಲ. ಅದಕ್ಕೇ ವಿಚಾರ ಎನ್ನುವಂಥದ್ದೇನಾದರೂ ಇದ್ದರೆ ಅದು ಶಂಕರ ಶರ್ಮರಿಗೆ ಮಾತ್ರ ಬರುತ್ತದೆ. ಅವರ ಮನೆಗೆ ಊರವರು ಇನ್ನೂ ಹೋಗಿ ಬಂದು ಮಾಡುತ್ತಾರೆಂದರೆ ಅದಕ್ಕೆ ಕಾರಣ ಶರ್ಮರ ಪತ್ನಿ ಶಾರದಕ್ಕನ ಆದರಾತಿಥ್ಯ. ಎಲ್ಲ ತಮ್ಮಂದಿರೂ ಶರ್ಮರೊಂದಿಗೇ ಇದ್ದಾರೆ. ತಮ್ಮಂದಿರಿಗೆ ಮದುವೆಯಾಗಿದೆಯಾ, ಮಕ್ಕಳಿದ್ದಾರಾ ಎಂಬುದೆಲ್ಲ ಇಲ್ಲಿ ಅಪ್ರಸ್ತುತ. ಸ್ವತಃ ಅವರೇ ತಲೆ ಕೆಡಿಸಿಕೊಂಡಿಲ್ಲ, ಇನ್ನು ನಮಗೇಕೆ ಅದೆಲ್ಲ? ಶರ್ಮರು ದುಡಿದ ದುಡ್ಡಲ್ಲಿ ಬಹುಪಾಲು ಬಂದಿದ್ದು ಕಳ್ಳ ನಾಟಾದಿಂದ. ಉಳಿದಿದ್ದು ನಮ್ಮಂತೆ ಅಡಿಕೆಯಿಂದ. ಊರಲ್ಲಿ ಕೊನೆಯಲ್ಲಿ ಇದ್ದಿದ್ದು ನಮ್ಮ ಮನೆ, ಹಣದ ವಿಷಯದಲ್ಲೂ ಕೊನೆಯವರು. ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಮತ್ತು ವಾರಕ್ಕೊಮ್ಮೆ ಮನೆಗೆ ಬರುವ ನಾನು. ಇಷ್ಟು ಲೌಕಿಕ ವ್ಯತ್ಯಾಸಗಳನ್ನು ಬಿಟ್ಟರೆ, ಸುಮ್ಮನೆ ಮಾತುಕತೆ ನಡೆಯುವಾಗಲಾಗಲಿ, ಉಳಿದ ದೈನಂದಿನ ಚಟುವಟಿಕೆಗಳಲ್ಲಾಗಲೀ ಎಲ್ಲೂ ಈ ಅಂತಸ್ತಿನ ವಿಚಾರ ಗಮನಕ್ಕೆ ಬರುವುದಿಲ್ಲ.

ಇಷ್ಟೇ ಆದರೆ ನನಗೇನೂ ಸಮಸ್ಯೆಯಿರುತ್ತಿರಲಿಲ್ಲ. ಶಂಕರ ಶರ್ಮರಿಗೊಬ್ಬಳು ಮಗಳಿದ್ದಾಳೆ, ಕುಸುಮ. ನನಗಿಂತ ಒಂದು ವರ್ಷ ಚಿಕ್ಕವಳು. ಅದಲ್ಲ ಸಮಸ್ಯೆ. ಅವಳು ಬೆಳದಿಂಗಳ ಬಣ್ಣದ, ತುಂಬಿದೆದೆಯ ಚೆಲುವೆ. ಸ್ವಭಾವದಲ್ಲಿ ಶಂಕರ ಶರ್ಮರಂತಿರದೆ ಅವರ ಪತ್ನಿಯಂತಿದ್ದಾಳೆ. ಅದು ನನ್ನ ಸಮಸ್ಯೆ. ಇರುವ ಹತ್ತು ಮತ್ತೊಂದು ಮನೆಗಳಲ್ಲಿ ಒಬ್ಬ ಸುಂದರಿ ಇದ್ದು, ಅವಳು ನನಗಿಂತ ಬುದ್ಧಿವಂತಳೂ, ಒಳ್ಳೆಯವಳೂ ಆಗಿ, ನನ್ನಷ್ಟೇ ಕಿತಾಪತಿಯೂ ಇದ್ದು, ನನ್ನೊಂದಿಗೆ ಚಿಕ್ಕಂದಿನಿಂದ ಸ್ಕೂಲಿಗೂ ಹೋಗಿ, ನನ್ನೊಂದಿಗೆ ಸಲಿಗೆಯಿದ್ದವಳೂ ಆದರೆ, ನನ್ನ ಜಾಗದಲ್ಲಿ ನೀವೇ ಇದ್ದರೆ ಪ್ರೀತಿಸದೇ ಇರುತ್ತಿದ್ದಿರೇ? ಕನಿಷ್ಟ ಒಳಗೊಳಗೆ? ಆದರೆ ಶಂಕರ ಶರ್ಮರ ಡಬಲ್ ಬ್ಯಾರೆಲ್ ಬಂದೂಕು ನೋಡಿದರೆ ಮತ್ತು ಅವರ ಬಗ್ಗೆ ಸ್ವಲ್ಪವಾದರೂ ತಿಳಿದವರಾದರೆ ನನ್ನಂತೆಯೇ ನೀವೂ ಉಗುಳು ನುಂಗುತ್ತಿದ್ದಿರಿ. ಒಂದನೇ ಇಯತ್ತೆಯಿಂದ ಹಿಡಿದು ನಾನು ಡಿಗ್ರಿ ಮುಗಿಸುವವರೆಗೆ ನನ್ನೊಂದಿಗೆ, ಆದರೆ ನನಗಿಂತ ಒಂದು ಕ್ಲಾಸು ಹಿಂದೆ ಓದಿದ ಕುಸುಮಳಿಗೆ ಈ ವರ್ಷ ಡಿಗ್ರಿ ಮುಗಿದಿದೆ. ಒಂದು ವರ್ಷ ಅನುಭವದ ನನಗೆ, ಜಾಗತೀಕರಣದ ದೆಸೆಯಿಂದಾಗಿ, ಆಗಲೇ ಬೆಂಗಳೂರಿನಲ್ಲಿ ಸಾಕಷ್ಟು ಸಂಬಳ. 'ಕುಸುಮ ನೌಕರಿ ಮಾಡುವುದು ಬೇಡ' ಎನ್ನುತ್ತಿದ್ದಾರೆ, ಶಂಕರ ಶರ್ಮ.

ಪ್ರತೀ ವಾರದ ಕೊನೆಗೆ ಮನೆಗೆ ಬರುವ ನಾನು ಅವತ್ತು ಕೊಂಚ ತಡವಾಗಿ ಎದ್ದೆ.

"ಯಾರನ್ನಂತೆ ಕುಸುಮ ಪ್ರೀತಿಸುತ್ತಿರುವುದು?" ಜಗುಲಿಯಿಂದ ಅಮ್ಮನ ಸ್ವರ ಮೆತ್ತಗೆ ಕೇಳಿಸಿತು. ನಾನು ಧಡಬಡಿಸಿ ಎದ್ದೆ. ಜಗುಲಿಯಲ್ಲಿ ಅಮ್ಮನ ಎದುರಲ್ಲಿ ಯಾರು ಕುಳಿತಿದ್ದಾರೋ ಕಾಣಿಸಲಿಲ್ಲ. ಅಮ್ಮನ ಪ್ರಶ್ನೆಗೆ ಉತ್ತರವೂ ಬರಲಿಲ್ಲ. ನನಗೆ ಎದೆಬಡಿತ ಜೋರಾಗತೊಡಗಿತು. "ಡೈರಿಯ ತುಂಬ ಚಿನ್ನು, ಪುಟ್ಟು ಅಂತಿದೆ", ಅಳುತ್ತಳುತ್ತ ಉತ್ತರಿಸಿದ್ದು ಕುಸುಮಳ ಅಮ್ಮ ಶಾರದಕ್ಕನ ಧ್ವನಿ. "ಯಾರೂಂತ ಗೊತ್ತಿಲ್ಲ, ಕೇಳಿದರೆ ಬಾಯಿ ಬಿಡುತ್ತಿಲ್ಲ", ಶಾರದಕ್ಕನೇ ಮುಂದುವರಿಸಿದಳು. ಕುಸುಮ ತನ್ನ ಡೈರಿಯಲ್ಲಿ ಬರೆದ ಪ್ರೇಮ ಪತ್ರ ಅವರಮ್ಮನ ಕೈಗೆ ಸಿಕ್ಕಂತಿದೆ. ಆಮ್ಮನೂ ಶಾರದಕ್ಕನೂ ಸ್ನೇಹಿತೆಯರು. ಕಷ್ಟಸುಖಗಳನ್ನೆಲ್ಲಾ, ಅದರಲ್ಲೂ ಗಂಡಂದಿರಿಗೆ ಹೇಳಲು ಧೈರ್ಯ ಬೇಕಾಗಬಹುದಾದಂಥದ್ದೆಲ್ಲ ಮೊದಲು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆ. ಸಿಟ್ಟಿನ ವಿಷಯದಲ್ಲಿ ಅಪ್ಪನೂ ಏನು ಕಡಿಮೆಯಿಲ್ಲವಲ್ಲ! "ಶರ್ಮರಿಗೆ ಹೇಳಿದೆಯಾ?", ಅಮ್ಮ ಕೇಳುತ್ತಿದ್ದಾಳೆ. "ಇನ್ನೂ ಇಲ್ಲ, ಹೇಗೆ ಹೇಳಲಿ, ನೀನೆ ಹೇಳು. ನಿಂಗವರ ವಿಷಯ ಗೊತ್ತಿಲ್ಲವಾ? ಗೊತ್ತಾದರೆ ಕೊಂದೇ ಬಿಡುತ್ತಾರೆ. ಅವರ ಅಕ್ಕನ ಮಗನಿಗೆ ಕುಸುಮಳನ್ನು ಕೊಡಬೇಕೆಂದು ಕುಣಿಯುತ್ತಿದ್ದಾರೆ. ಅವನಿಗೆ ಹೆಂಡತಿ ನೌಕರಿ ಮಾಡುವುದು ಇಷ್ಟವಿಲ್ಲ ಅಂತಲೇ ಇವರು ಕುಸುಮಳನ್ನು ನೌಕರಿ ಮಾಡಬೇಡ ಎಂದಿದ್ದು. ನಾನೀಗ ಇವರಿಗೆ ಹೇಳದೇ ಇದ್ದರೂ ನಂತರವಾದರೂ ತಿಳಿಯದೇ ಇರುತ್ತದೆಯೇ?"

ಅಂದರೆ ವಿಷಯ ಇನ್ನೂ ಶಂಕರ ಶರ್ಮರಿಗೆ ತಲುಪಿಲ್ಲವೆಂದಾಯ್ತು. ನನಗೆ ಕುಸುಮಳ ಮುಖ ಕಣ್ಣ ಮುಂದೆ ಬಂತು. ಹಠದಲ್ಲಿ ಅವಳು ಅವಳಪ್ಪನಿಗಿಂತ ಕೊಂಚ ಮೇಲೆ. ಧೈರ್ಯದಲ್ಲೂ ಅಷ್ಟೆ. ಶಾರದಕ್ಕ ಹೆದರುತ್ತಿರುವುದೇ ಅದಕ್ಕೆ. ತಂದೆ ಮಗಳ ಮಧ್ಯೆ ಮುಂದೆ ಆಗಬಹುದಾದ ಯುಧ್ಧ, ಅದನ್ನು ಗೆಲ್ಲಲು ಶಂಕರ ಶರ್ಮರು ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಶಾರದಕ್ಕನಿಗೆ ಅಂದಾಜಿದೆ. ಅವರ ಅಕ್ಕನ ಮಗನ ಜೊತೆ ಮದುವೆ ನಡೆಯುವವರೆಗೆ ಮಗಳನ್ನು ಹೊರಗೇ ಬಿಡದೆ, ಒಬ್ಬರಿಗೂ ಸುಳಿವೇ ಕೊಡದೇ ಕೆಲಸ ಮುಗಿಸುವ ತಾಕತ್ತಿರುವ ಮನುಷ್ಯ. ಕುಸುಮ ಏನೇ ಹಾರಾಡಿದರೂ ಶಂಕರ ಶರ್ಮರ ತನಕ ವಿಷಯ ಹೋದ ಮೇಲೆ, ಶಂಕರ ಶರ್ಮರು ಏನು ನಿರ್ಧರಿಸುತ್ತಾರೂ ಅದರಂತೆಯೇ ನಡೆಯುತ್ತದೆ.

ನಾನಿನ್ನು ಸುಮ್ಮನಿರುವುದು ಸಾಧ್ಯವಿರಲಿಲ್ಲ. ಮುಖವನ್ನೂ ತೊಳೆಯದೇ ಜಗುಲಿಗೆ ಬಂದೆ. "ಶಾರದಕ್ಕ, ನೀವೇನೂ ತಿಳಿದುಕೊಳ್ಳುವುದಿಲ್ಲವೆಂದರೆ..." ಎನ್ನುತ್ತಾ ಶಾರದಕ್ಕನ ಮುಖ ನೋಡಿದೆ. ನಾನು ಕೇಳಿಸಿಕೊಂಡಿದ್ದು ಆಕೆಗೂ ತಿಳಿಯಿತು. "ಕುಸುಮಳ ಬಳಿ ನಾನು ಮಾತನಾಡುತ್ತೇನೆ. ಅಲ್ಲಿಯವರೆಗೂ ದಯವಿಟ್ಟು ಯಾರಿಗೂ ಹೇಳಬೇಡಿ", ಎಂದೆ. "ಕುಸುಮಳ ಹಠ ನಿನಗೆ ಗೊತ್ತಲ್ಲಪ್ಪ, ಅವಳೆಲ್ಲಿ ಕೇಳುತ್ತಾಳೆ ಬಿಡು", ಶಾರದಕ್ಕ ತಮ್ಮಷ್ಟಕ್ಕೆ ಎಂಬಂತೆ ಹೇಳಿಕೊಂಡರು. "ಶರ್ಮರಿಗೆ ಹೇಳುವುದೇ ಆದರೆ ಯಾವತ್ತಿದ್ದರೂ ಹೇಳಬಹುದು, ಅಲ್ಲಿಯವರೆಗೂ ನನಗೊಂದು ಅವಕಾಶ ಕೊಡಿ" ಎಂದೆ. ಶಾರದಕ್ಕ ಸುಮ್ಮನೆ ತಲೆಯಾಡಿಸಿದರು. 'ಪತ್ರದಲ್ಲಿ ಇನ್ನೂ ಏನಿತ್ತು' ಎಂದು ಕೇಳಬೇಕೆನಿಸಿದರೂ ನಾನು ಕೇಳಲಿಲ್ಲ. ಶಾರದಕ್ಕ ಸ್ವಲ್ಪ ಹೊತ್ತು ಕುಳಿತಿದ್ದು ನಂತರ ಹೊರಟು ಹೋದರು. ಶರ್ಮರಿಗೆ ವಿಷಯ ತಿಳಿಯದ್ದರಿಂದ ಕುಸುಮಳಿಗೆ ಕನಿಷ್ಠ ಸಿಟಿಗೆ ಹೋಗಿಬರುವ ಸ್ವಾತಂತ್ರ್ಯವಾದರೂ ಇರುತ್ತದೆ.

ಬೆಳಗಿನ ತಿಂಡಿ ಮುಗಿಸಿ ತಕ್ಷಣವೇ ಕುಸುಮಳ ಮನೆಯತ್ತ ಹೆಜ್ಜೆ ಹಾಕಿದೆ. ದುರದೃಷ್ಟವಶಾತ್ ಶಂಕರ ಶರ್ಮರೂ, ಅವರ ಮೂರೂ ಜನ ದಾಂಡಿಗ ತಮ್ಮಂದಿರೂ ಮನೆಯಲ್ಲೇ ಇದ್ದರು. ಶಂಕರ ಶರ್ಮರು ದೂರದಿಂದಲೇ ಒಂದೇ ಹುಬ್ಬು ಹಾರಿಸಿದರು. ಹಾಗಂದರೆ, 'ಹೇಗಿದ್ದೀಯಾ? ಏನು ಇತ್ತ ಬಂದಿದ್ದು?' ಎಂಬ ಎರಡೂ ಪ್ರಶ್ನೆಗಳಾಗುತ್ತವೆ ಎಂಬುದು ಚಿಕ್ಕಂದಿನಿಂದ ನೋಡಿದ ನನಗೆ ಅರ್ಥವಾಗುತ್ತದೆ. "ಹೀಗೇ ಸುಮ್ಮನೆ ಬಂದೆ", ಎಂದೆ. ತಮ್ಮಂದಿರ್ಯಾರೂ ಮನೆಗೆ ಬಂದವರ ಬಳಿ ಮಾತನಾಡುವುದಿಲ್ಲ. ಮೂಡು ಬಂದರೆ,'ನೀನು ಬಂದಿದ್ದು ನನಗೆ ಗೊತ್ತಾಗಿದೆ' ಅನ್ನುವಂತ ಒಂದು ಲುಕ್ ಕೊಟ್ಟು ಉಳಿದಿದ್ದು ಅಣ್ಣನಿಗೆ ಬಿಟ್ಟಿದ್ದು ಎನ್ನುವಂತೆ ಇರುತ್ತಾರೆ. ನಾನು ಬಂದಿದ್ದು ಕುಸುಮಳಿಗೆ ಗೊತ್ತಾಗಿರಬೇಕು. ಜಗುಲಿಗೆ ಬಂದು ನಗಲಾರದೇ ನಗುವಂಥ ಒಂದು ನಗು ಕೊಟ್ಟಳು. "ಏನ್ ಕುಸುಮಾ? ಚೆನ್ನಾಗಿದ್ದೀಯಾ ?" ಎಂದೆ. ಅದಕ್ಕೂ ಕುಸುಮ ಅಂಥದ್ದೇ ಇನ್ನೊಂದು ನಗು ಕೊಟ್ಟು ಹೊರಟು ಹೋದಳು. ಈ ಸೈತಾನರುಗಳ ಮಧ್ಯೆ ಇದಕ್ಕಿಂತ ಹೆಚ್ಚು ಕೇಳುವುದು ಸಾಧ್ಯವಿರಲಿಲ್ಲ. ಉಳಿದ ದಿನಗಳಲ್ಲಿ ಶಂಕರ ಶರ್ಮರ ಎದುರಿಗೇ ಹರಟುತಿದ್ದವಳು ಇವತ್ತು ಅವಳ ಮೂಡ್ ಸರಿಯಿಲ್ಲದಿದ್ದರಿಂದ ಆ ಸೀನೇ ಇರಲಿಲ್ಲ. ಶಾರದಕ್ಕ ಒಳಗಿಂದಲೇ ಜಗುಲಿಯ ಕಡೆ ಕಿವಿಯಿಟ್ಟಿದ್ದು ನನಗೆ ಗೊತ್ತಾಗುತ್ತಿತ್ತು. "ಮತ್ತೇನು ಸಮಾಚಾರ?" ಅವರಲ್ಲೊಬ್ಬ ನನ್ನತ್ತ ನೋಡುತ್ತಿರಬಹುದೆಂದು ನನಗನ್ನಿಸಿ ಅವನನ್ನೇ ನೋಡುತ್ತ ಕೇಳಿದೆ. ನನ್ನ ಕೈಯಲ್ಲಿದ್ದ ಮೊಬೈಲು ನೋಡುತ್ತ ಕುಳಿತಿದ್ದ ಆತ ಮಾತನಾಡಲಿಲ್ಲ. ಶಂಕರ ಶರ್ಮರೇ ತಾಂಬೂಲ ತುಂಬಿದ ಬಾಯಲ್ಲಿ ಒಮ್ಮೆ ತುಟಿಯನ್ನು ಸಂಕುಚಿತಗೊಳಿಸಿ, ಕೈಯನ್ನು ಗಾಳಿಯಲ್ಲಿ ಒಮ್ಮೆ ತಿರುಗಿಸಿ ಮೇಲಕ್ಕೆತ್ತಿ, ಮಾತನಾಡದೇ, 'ಹೀಗೇ...ನಡೀತಿದೆ' ಎಂಬರ್ಥದ ಸಿಗ್ನಲ್ ಕೊಟ್ಟರು. ಮುಂದೆ ಟೀ ಕುಡಿದು ನಾನು ಎದ್ದು ಬರುವ ಹದಿನೈದು ನಿಮಿಷದಗಳವರೆಗೂ ಇದಕ್ಕಿಂತ ಹೆಚ್ಚಿನದೇನೂ ನಡೆಯಲಿಲ್ಲ.

ಸಾಯಂಕಾಲ ನಮ್ಮ ಮನೆಗೆ ಬಂದ ಶಾರದಕ್ಕನ ಬಳಿ ಮತ್ತೊಮ್ಮೆ, ಶಂಕರ ಶರ್ಮರಿಗೆ ಈ ವಿಷಯ ಹೇಳದಂತೆಯೂ, ನನಗೊಂದು ತಿಂಗಳ ಅವಕಾಶ ಕೊಡುವಂತೆಯೂ ಕೇಳಿಕೊಂಡೆ. ಆಕೆ ಒಪ್ಪಿಕೊಂಡರು. ಮರುದಿನ ಸೋಮವಾರವಾದ್ದರಿಂದ ಭಾರವಾದ ಹೃದಯದೊಂದಿಗೆ ಬೆಂಗಳೂರಿಗೆ ವಾಪಸಾದೆ.

ಮುಂದೆ ಒಂದೆರಡು ವಾರ ಶರ್ಮರ ಮನೆಗೆ ಹೋದೆನಾದರೂ ಮೊದಲಿಗಿಂತ ಹೆಚ್ಚಿನದೇನೂ ಆಗಲಿಲ್ಲ.

ಈ ಮಧ್ಯೆ ಈಗಿನದಕ್ಕಿಂತ ಜಾಸ್ತಿ ಸಂಬಳದ ಕೆಲಸವೊಂದು ನನಗೆ ಸಿಕ್ಕಿತು. ಮನೆಯಲ್ಲಿ ಅಪ್ಪ,ಅಮ್ಮನಿಗೆ ನಾನು ದೆಹಲಿಗೆ ತೆರಳಬೇಕಾಗುತ್ತದೆಂದು ಹೇಳಿದೆ. ಸಂಬಳ ಜಾಸ್ತಿಯಾಗುತ್ತದೆಂದೂ ಹೇಳಿದೆ. ಅಮ್ಮ ಅದನ್ನು ಕೇಳಿಸಿಕೊಳ್ಳದೆ, 'ಎಷ್ಟು ದಿವಸಕ್ಕೊಮ್ಮೆ ಮನೆಗೆ ಬರಬಹುದು?' ಎಂದು ಕೇಳಿದಳು. ಅಪ್ಪ ಏನೂ ಮಾತನಾಡಲಿಲ್ಲ. ಬೆಂಗಳೂರಿನ ಕೆಲಸಕ್ಕೆ ಆಗಲೇ ರಾಜೀನಾಮೆ ನೀಡಿರುವುದಾಗಿಯೂ, ನಾಲ್ಕು ದಿನ ಊರಲ್ಲಿದ್ದು ನಂತರ ದೆಹಲಿಗೆ ಹೊರಡುತ್ತಿರುವುದಾಗಿಯೂ ತಿಳಿಸಿದೆ. ಆಮೇಲೆ ಸ್ವಲ್ಪ ಹೊತ್ತು ಬಿಟ್ಟು ಅಮ್ಮ ನನ್ನನ್ನು ಪಕ್ಕಕ್ಕೆ ಕರೆದು,"ಕುಸುಮಳೊಂದಿಗೆ ಮಾತನಾಡಿದೆಯಾ?" ಎಂದು ಕೇಳಿದಳು.

ನನಗೆ ನನ್ನ ಕರ್ತವ್ಯದ ಅರಿವಿತ್ತು. ಮರುದಿನ ಸಾಯಂಕಾಲ ಕುಸುಮಳ ಮನೆಯೆಡೆಗೆ ಹೆಜ್ಜೆ ಹಾಕಿದೆ. ಮನೆಯನ್ನು ಸಮೀಪಿಸುತ್ತಿದ್ದಂತೆ ಯಾಕೋ ಎಂದಿನಂತೆ ಅನಿಸಲಿಲ್ಲ. "ತಕ್ಷಣವೇ ರೈಲ್ವೆ ಸ್ಟೇಷನ್ ಗೆ ಹೊರಡಿ" ಶರ್ಮರು ತಮ್ಮಂದಿರಿಗೆ ಕೂಗುತ್ತಿದ್ದದ್ದು ಕೇಳಿಸಿತು. ಶಾರದಕ್ಕನ ಮುಖದಲ್ಲಿ ಗಾಬರಿ. "ನಾನು ಬಸ್ಟಾಪಿನ ಹತ್ತಿರ ನೋಡುತ್ತೇನೆ, ಎಲ್ಲಿ ಹೋಗುತ್ತಾಳೆ ನೋಡುತ್ತೇನೆ" ಶರ್ಮರ ಕೂಗಾಟ. "ಯಾಕೆ? ಏನಾಯಿತು?", ನಾನು ಕೇಳಿದೆ. ಶಾರದಕ್ಕ ಕಣ್ಣಲ್ಲಿ ನೀರು ತುಂಬಿಕೊಂಡು, "ಕುಸುಮ ಕಾಣಿಸುತ್ತಿಲ್ಲ" ಎಂದರು. ಅಷ್ಟು ಹೇಳುವಾಗ ಅವರ ಧ್ವನಿ ನಡುಗುತ್ತಿತ್ತು. ಶಂಕರ ಶರ್ಮರ ಕೋಪ ಮತ್ತೆ ನೆತ್ತಿಗೇರಿತು. ಮುಷ್ಠಿ ಬಿಗಿದು ಶಾರದಕ್ಕನಿಗೆ ಹೊಡೆಯಲು ಹೋಗುವವರಂತೆ ಅಭಿನಯಿಸಿ, "ಮೊದಲೇ ಹೇಳಲೇನಾಗಿತ್ತೆ ರಂಡೆ ನಿಂಗೆ?" ಎಂದು ಅರಚಿದರು. ನಾನಿನ್ನೂ ಸುಮ್ಮನಿದ್ದರೆ ಚೆನ್ನಾಗಿರದು ಅನ್ನಿಸಿ, ಹೇಳಲೋ ಬೇಡವೋ ಎಂದು ಯೋಚಿಸುವವರಂತೆ ಅಭಿನಯಿಸಿ, "ನೀವೀಗ ರೈಲ್ವೆ ಸ್ಟೇಷನ್ನಿಗೆ ಹೋದರೆ ಪ್ರಯೋಜನವಾಗದು, ಆಕೆ ಸಿಟಿಯಿಂದ ಬೆಂಗಳೂರಿಗೆ ಇವತ್ತಿನ ಬಸ್ಸಿಗೆ ರಿಸರ್ವೇಷನ್ ಮಾಡಿದ್ದು ನಿನ್ನೆ ನೋಡಿದೆ" ಎಂದುಬಿಟ್ಟೆ. ಶರ್ಮ ಅಚ್ಚರಿಯಿಂದ ನನ್ನೆಡೆಗೆ ತಿರುಗಿ ನೋಡಿದರು. ನಾನೂ ಪ್ರಯೋಜನಕ್ಕೆ ಬರುವ ಒಂದು ವಸ್ತು ಎಂದು ಇವತ್ತು ಅನಿಸಿತಿರಬೇಕು. "ಇಷ್ಟಕ್ಕೂ ಬೇಕೆಂದರೆ ರೈಲ್ವೆ ಸ್ಟೇಷನ್ನಿಗೆ ನಾನು ಹೋಗುತ್ತೇನೆ, ನೀವು ಬಸ್ಟಾಪಿನ ಕಡೆ ನೋಡಿ" ನಾನು ಮುಂದುವರಿದು ಹೇಳಿದೆ. ಶರ್ಮರು ಗಡಿಬಿಡಿಯಿಂದ ಹೊಸ ವಸ್ತ್ರ ಹಾಕಿ ರೆಡಿಯಾದರು. ಅವಶ್ಯ ಬಿದ್ದರೆ ಸಿಟಿಯವರೆಗೂ ಹೋಗಿ ಬರುವ ಪ್ಲಾನ್ ಇದ್ದಂತಿತ್ತು. ಅವರೊಂದಿಗೆ ಜೀಪಿನಲ್ಲಿ ಅವರ ತಮ್ಮಂದಿರೂ ಹೊರಟರು. ನಾನು ರೈಲ್ವೆ ಸ್ಟೇಷನ್ನಿನ ಕಡೆ ಹೆಜ್ಜೆ ಹಾಕಿದೆ. ಶರ್ಮರು ಹೋಗುವಷ್ಟರಲ್ಲಿ ಸಿಟಿಗೆ ಹೋಗುವ ಬಸ್ಸು ಹೊರಟು ಹೋಗಿರುತ್ತದೆ. ಶರ್ಮರಿಗೆ ಸಿಟಿಯವರೆಗೂ ಹೋಗದೇ ಬೇರೆ ದಾರಿಯಿರಲಿಲ್ಲ. ಬೆಂಗಳೂರಿನ ಬಸ್ಸು ಸಿಟಿಯಿಂದ ಹೊರಡಲು ಇನ್ನೂ ಒಂದು ತಾಸಿತ್ತು. ಅಷ್ಟರೊಳಗೆ ಶರ್ಮ ಸಿಟಿ ತಲುಪುತ್ತಾರೆ.

ನಾನು ಹೋಗುವಷ್ಟರಲ್ಲಿ ಪೂನಾಗೆ ಹೋಗುವ ಟ್ರೈನು ಹೋಗಿಯಾಗಿತ್ತು. ಖಾಲಿ ಸ್ಟೇಷನ್ ನೋಡಿ ಹಾಗೆಯೇ ವಾಪಸು ಬಂದೆ. ಮನೆಗೆ ಬಂದು ಎರಡು ತಾಸಿನಲ್ಲಿ ಶರ್ಮರ ಗ್ಯಾಂಗು ವಾಪಸು ಬಂತು. ಕುಸುಮ ಅಲ್ಲೂ ಇರಲಿಲ್ಲ. ಒಂದು ಮನೆಯ ವಿಷಯ ಇಡೀ ಊರು ಹಬ್ಬಲು ಎಷ್ಟು ಹೊತ್ತು ಬೇಕು? ಮುಂದೆರಡು ದಿನ ಊರಲ್ಲಿ ಅದೇ ಚರ್ಚೆಯಾಯಿತು. ಕುಸುಮ ಅಲ್ಲಿರಬಹುದು, ಇಲ್ಲಿರಬಹುದು ಅಂತೆಲ್ಲ ಊರ ಜನ ಮಾತಾಡಿಕೊಂದರು. ಶರ್ಮರ ಅಕ್ಕನೂ ಬಂದಿಳಿದಳು. ಶಾರದಕ್ಕನಿಗೆ ಎರಡು ಕೊಂಕು ಮಾತನಾಡಿದ್ದು ಬಿಟ್ಟರೆ ಆಕೆಯಿಂದ ಮತ್ತೇನೂ ಆಗುವಂತಿರಲಿಲ್ಲ. ಮೂರನೇ ದಿನ ನಾನು ನನ್ನ ಲಗೇಜ್ ದೆಹಲಿಗೆ ಹೊರಡಲು ರೆಡಿಯಾದೆ. ಅಪ್ಪ ಅಮ್ಮನ ಕಣ್ಣಿನಲ್ಲಿ ಕಂಡೂ ಕಾಣದಂತೆ ನೀರು. ನನ್ನನ್ನು ಬಸ್ಟಾಪಿನವರೆಗೆ ಬಿಡಲು ಅಣ್ಣ ರೆಡಿಯಾದ. ಹೋಗುವಾಗ ಏನನ್ನಿಸಿತೋ ನೆನಪಿಲ್ಲ, ಅಪ್ಪ, ಅಮ್ಮನ ಜೊತೆಗಿದ್ದ ಶಾರದಕ್ಕನಿಗೂ ನಮಸ್ಕರಿಸಿದೆ.
* * *
ಉಪಸಂಹಾರ...

ನನ್ನ ಮತ್ತು ಕುಸುಮಾಳ ಪ್ರೀತಿ ತುಂಬಿದ ಐದು ವರ್ಷದ ದಾಂಪತ್ಯದಲ್ಲಿ ಈಗ ಮುದ್ದಾದ ಮಗುವಿದೆ. ಇದಕ್ಕಿಂತಲೂ ಹೆಚ್ಚು ಸಂತೋಷವನ್ನು ನಾನು ದೇವರಲ್ಲಿ ಎಂದೂ ಬೇಡಿಕೊಳ್ಳಲಿಲ್ಲ. ಕುಸುಮಾ ಡೈರಿಯಲ್ಲಿ ಬರೆದಿದ್ದು ಶಾರದಕ್ಕನಿಗೆ ಅಷ್ಟು ಬೇಗ ತಿಳಿಯುತ್ತದೆಂದು ನಾವಂದುಕೊಂಡಿರಲಿಲ್ಲ. ಅವತ್ತಿನ ಮಟ್ಟಿಗೆ ಅದು ಆಘಾತವೇ. ಶರ್ಮರಿಗೆ ತಿಳಿಯುವ ಮೊದಲೇ ಏನೋ ಒಂದು ನಿರ್ಧಾರಕ್ಕೆ ಬರಲೇ ಬೇಕಿತ್ತು. ಶರ್ಮರಿಗೆ ವಿಷಯ ಮೊದಲೇ ತಿಳಿಯದಂತೆ ನೋಡಿಕೊಂಡಿದ್ದರಿಂದ ಕುಸುಮ ಬೆಂಗಳೂರಿನಲ್ಲಿರುವ ನನ್ನೊಂದಿಗೆ ಸಿಟಿಯಿಂದ ಫೋನಿನಲ್ಲಿ ಮಾತನಾಡುವ ವ್ಯವಸ್ಥೆ ಹಾಗೇ ಉಳಿಯಿತು. ನನಗಿಂತ ಮೂರುದಿನ ಮೊದಲೇ ಕುಸುಮ ಊರು ಬಿಡುವಂತೆ ನೋಡಿಕೊಂಡು ಅವಳು ಪೂನಾ ತಲುಪುವವರೆಗೆ ನಾನು ಊರಲ್ಲಿ ಶರ್ಮರ ದಾರಿ ತಪ್ಪಿಸುತ್ತ ಕೂರದಿದ್ದರೆ, ಕುಸುಮ ಮತ್ತು ನಾನು ಊರ ಗಡಿ ದಾಟುವುದರೊಳಗಾಗಿ ಶರ್ಮ ಅಡ್ಡಗಟ್ಟಿಬಿಡುತ್ತಿದ್ದರು. ನಾನು ನಡಿಗೆಯಲ್ಲಿ ರೈಲ್ವೆ ಸ್ಟೇಷನ್ ತಲುಪುವೊದರೊಳಗಾಗಿ ಟ್ರೈನು ಹೊರಟು ಹೋಯಿತಾಗಲೀ ಶರ್ಮರು ಜೀಪಿನಲ್ಲಿ ಸ್ಟೇಷನ್ನಿಗೆ ಹೋಗಿದ್ದರೆ ಕುಸುಮ ಅವತ್ತು ಶರ್ಮರಿಗೆ ಸಿಕ್ಕಿರುತ್ತಿದ್ದಳು. ಅಷ್ಟಕ್ಕೂ ಕುಸುಮ ಮನೆ ಬಿಟ್ಟಿದ್ದು ಅಷ್ಟು ಬೇಗ ಗಮನಕ್ಕೆ ಬರುತ್ತದೆಂದು ನಾನು ಅಂದುಕೊಂಡಿರಲೇ ಇಲ್ಲ. ಅದಕ್ಕೇ ಶರ್ಮರನ್ನು ಬಸ್ಸಿನ ಕಡೆಗೆ ಅಟ್ಟಬೇಕಾಯಿತು. ಅದ್ರಷ್ಟವಶಾತ್ ಎಲ್ಲವೂ ಅಂದುಕೊಂಡಂತೆಯೇ ಆಯಿತು. ನಾನು ಕೆಲಸ ಮಾಡುವುದು ಪೂನಾದಲ್ಲಿ ಎಂಬ ವಿಷಯ ಹೇಳದೆ ದೆಹಲಿಯಲ್ಲಿ ಎಂದು ಹೇಳಿದ ಸುಳ್ಳು ಎಕ್ಸ್ಟ್ರಾ ಆಯಿತೆಂದು ಇವತ್ತು ನನಗನ್ನಿಸುತ್ತದೆ! ಅವತ್ತಿನ ವಯಸ್ಸು ಮತ್ತು ಮನಸ್ಥಿತಿಯಲ್ಲಿ ನಮ್ಮಿಬ್ಬರ ಪ್ರೀತಿಯನ್ನು ಉಳಿಸಿಕೊಳ್ಳಲು ಇದಕ್ಕಿಂತ ಹೆಚ್ಚಿನದು ನಮಗೆ ಹೊಳೆಯಲಿಲ್ಲ. ಕ್ಷಮಿಸಿ, ಅವತ್ತಿನ ಮಟ್ಟಿಗೆ ನಿಮಗೂ ಹೇಳಲು ಧೈರ್ಯ ಸಾಲಲಿಲ್ಲ!

ನಾನು ಮತ್ತು ಕುಸುಮ ಆ ನಂತರ ಊರಿಗೆ ಹೋಗಿಲ್ಲ. ಪೂನಾಗೆ ಬಂದ ಒಂದು ತಿಂಗಳಿಗೆ ಅಪ್ಪ ಅಮ್ಮನಿಗೆ ನಿಧಾನಕ್ಕೆ ವಿಷಯ ತಿಳಿಸಿದೆ. ಮೊದಲು ಸಿಟ್ಟು ಮಾಡಿಕೊಂಡರಾದರೂ ಬೇಗ ಅರ್ಥ ಮಾಡಿಕೊಂಡಿದ್ದು ಅಪ್ಪ ಮತ್ತು ಅಣ್ಣ. ಶಾರದಕ್ಕನಿಗೆ ಬೇಜಾರಾಗದ್ದಕ್ಕೆ ಅಮ್ಮನೂ ನಿಧಾನಕ್ಕೆ ಸರಿ ಹೋದಳು. ನಿಜ ಹೇಳಬೇಕೆಂದರೆ, ನನಗೆ ತಿಳಿದಂತೆ, ಎಲ್ಲರಿಗಿಂತ ಹೆಚ್ಚು ಖುಷಿಪಟ್ಟಿದ್ದು ಶಾರದಕ್ಕ. ಶರ್ಮ ಮೊದಲು ಕೂಗಾಡಿದರೂ ಶಾರದಕ್ಕನಿಗೆ ನಮ್ಮ ಮನೆಗೆ ಬರದಂತೆ ತಡೆಯನ್ನೇನೂ ಹಾಕಲಿಲ್ಲ. ತಾನು ಬರವುದು ಬಿಟ್ಟರು ಅಷ್ಟೆ.

ಮೊಮ್ಮಗುವನ್ನು ನೋಡಲು ಬರುತ್ತಿರುವ ಅಪ್ಪ, ಅಮ್ಮನನ್ನು ಸ್ಟೇಷನ್ನಿನಿಂದ ಕರೆತರಲು ನಾನು ರೆಡಿಯಾದೆ. ಮೊಮ್ಮಗನಿಗೆ ಕೊಡುವಂತೆ ಬಂಗಾರದ ಚೈನು ಕೊಟ್ಟು ಹೋದ ಶರ್ಮರ ವಿಷಯ ಅಮ್ಮ ಫೋನಿನಲ್ಲಿ ಹೇಳಿದ್ದು ನೆನಪಾಗಿ ನನಗೆ ನಗು ಬಂತು.

6 comments:

Umesh Balikai said...

ಸುಪ್ತವರ್ಣ,

ತುಂಬಾ ಚೆನ್ನಾಗಿದೆ ಕಥೆ. ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುತ್ತದೆ. ಇಷ್ಟವಾಯಿತು.

ಬ್ಲಾಗು ಲೋಕಕ್ಕೆ ಇತ್ತೀಚಿನ ಎಂಟ್ರೀ ಅನ್ಸುತ್ತೆ, ಆದರೆ ತುಂಬಾ ಜನ ಹೊಸಬರಿಗಿಂತ ಹೆಚ್ಚು ಕಾಳಜಿ ವಹಿಸಿ ಬರೆದಿದ್ದೀರಿ. ಇನ್ನಷ್ಟು ಬರೆಯಿರಿ.

ಅಭಿನಂದನೆಗಳೊಂದಿಗೆ,

-ಉಮೇಶ್

sunaath said...

ಸುಪ್ತವರ್ಣ,
ನಿಮ್ಮ ಎರಡೂ ಕತೆಗಳ ಒಂದು ಲಕ್ಷಣವೆಂದರೆ ಸರಾಗವಾದ ಓಟ.
ಎರಡೂ ಕತೆಗಳಲ್ಲಿ suspenseಅನ್ನು ಕಾಯ್ದುಕೊಂಡು ಹೋಗಿದ್ದೀರಿ.
ಅಭಿನಂದನೆಗಳು.

ಗೌತಮ್ ಹೆಗಡೆ said...

nimma barahada stule istavaaytu .aagaga nimma blog ge bheti koduttene. sarala niroopane nimmaadu.heege bareyuttiri .

ಸಿಮೆಂಟು ಮರಳಿನ ಮಧ್ಯೆ said...

ಅನಾಮಿಕರೆ...

ನಿಮ್ಮ ಕಥೆ..
ಬರವಣಿಗೆಯ ಶೈಲಿ..
ಎರಡೂ ಇಷ್ಟವಾಗಿಬಿಟ್ಟಿತು..

ಬಹುಷಃ ನಿಮ್ಮ ಬರವಣಿಗೆಯನ್ನು ನಾನು ಮೊದಲು ಓದಿದ್ದೇನೆ...

ಅನಾಮಿಕರಾಗಿಯಾದರೂ ದಯವಿಟ್ಟು ಬರೆಯಿರಿ...

ಸುಪ್ತವರ್ಣ said...

ಉಮೇಶ್, ಸುನಾಥ್ ಸರ್, ಗೌತಮ್, ಧನ್ಯವಾದಗಳು! ಪ್ರಕಾಶ ಹೆಗಡೆಯವರೆ, ನಾನು ಬರೆದಿದ್ದು ಇದೇ ಮೊದಲು. ನನ್ನ ಶೈಲಿ ಇನ್ಯಾರದ್ದೋ ಹೋಲುತ್ತಿದೆಯೆ ? ಸ್ವಲ್ಪ ಗಾಬರಿಯಾಗುತ್ತಿದೆ! ಮೆಚ್ಚಿದ್ದಕ್ಕೆ ಧನ್ಯವಾದಗಳು!

ಸಾಗರದಾಚೆಯ ಇಂಚರ said...

ಸಪ್ತವರ್ಣ,
ತುಂಬಾ ಕುತೂಹಲಕಾರಿ ಕಥೆ, ಓದಿಸಿಕೊಂಡು ಹೋಗುತ್ತದೆ