Tuesday, November 3, 2009

ಚಕ್ರದಿಂದ ಚಕ್ರಕ್ಕೆ...

ಬಸ್ಸಲ್ಲಿ ಓಡಾಡುವುದು ಮಹಾಕಷ್ಟ ಎಂದು ಗೊತ್ತಾದದ್ದು ಮೂರು ತಿಂಗಳ ಸಂಬಳ ಬಂದು ಹಳೆಯ ಸಾಲವೆಲ್ಲ ತೀರಿ, ಬ್ಯಾಂಕಿನಲ್ಲಿ ಶೇಖರಕೊಂಡ ಇಪ್ಪತ್ತು ಸಾವಿರ ರೂಪಾಯಿ ಕಣ್ಣು ಕುಕ್ಕತೊಡಗಿದಾಗ! ತಡವೇಕೆ ಎಂದು ಅದೇ ತಿಂಗಳು ಒಂದು ಬೈಕ್ ಕೊಂಡುಕೊಂಡೆ. ಉಳಿದ ದುಡ್ಡಿಗೆ ಬ್ಯಾಂಕುಗಳಿದ್ದಾವಲ್ಲ. ಅವರಿರುವುದೇತಕ್ಕೆ?

ನನ್ನದು ಸಖ್ಖತ್ ಲೇಟೆಸ್ಟ್ ಬೈಕು. ಥೇಟ್ ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆ(ನಾನ್ಯಾವತ್ತೂ ಕಾರಿನಲ್ಲಿ ಕೂತಿಲ್ಲ, ಇದು ಹಾಗೆಂದು ನನ್ನ ಸ್ನೇಹಿತರು ಹೇಳುವುದನ್ನು ಕೇಳಿದ್ದೇನೆ). ಕಾರಿನಲ್ಲಿ ಕೂತಂತೆಯೇ ಅನಿಸುತ್ತದೆಂದು ನನ್ನ ಕೆಲವು ಸ್ನೇಹಿತರಿಗೂ ನಾನೇ ಹೇಳಿದೆ.

ಹೊಸತರಲ್ಲಿ ಎಲ್ಲರನ್ನೂ ಬಲಗಡೆಯಿಂದಲೇ overtake ಮಾಡುತ್ತಿದ್ದ ನಾನು, ಕ್ರಮೇಣ ಎಡಗಡೆಯಿಂದ ನುಗ್ಗಿ ಹೋಗಿ ಬೇಗನೇ ಗಮ್ಯ ತಲುಪುವ ಲಕ್ಷಾಂತರ ದ್ವಿಚಕ್ರಿಗಳ ರಹಸ್ಯ ಮಂತ್ರವನ್ನು ಅರಿತುಕೊಂಡೆ. ಏನು ತಮಾಷೆ ನೋಡಿ! ಕಾರಿನಲ್ಲಿರುವವರಿಗೆ ಇಪ್ಪತ್ತು ನಿಮಿಷ ಬೇಕಾದ ಕಡೆ ಬೈಕಿಗೆ ಹತ್ತೇ ನಿಮಿಷ ಸಾಕು. ಸಿಗ್ನಲ್ಲು ಟ್ರಾಫಿಕ್ಕು ಎಂಥದ್ದೇ ಇರಲಿ, ಬೈಕಿಗೆ ಬೇಕಾದಷ್ಟು ಜಾಗ ಇದ್ದೇ ಇರುತ್ತದೆ. ಮರಳಿನ ಪಾತ್ರೆಯಲ್ಲಿನ ನೀರಿನಂತೆ, ದೊಡ್ಡ ವಾಹನಗಳ ಮಧ್ಯೆ ಸುಮ್ಮನೆ ತೂರಿ ಹೋಗಿ ಸಿಗ್ನಲ್ಲಿನ ಮುಂದಿನ ಸಾಲಿನಲ್ಲಿ ನಿಂತರಾಯಿತು. ಹೀಗೆ ನುಗ್ಗುವಾಗ ಒಮ್ಮೊಮ್ಮೆ ಕಾರುಗಳಿಗೆ touch ಆಗುತ್ತದಾದರೂ ಅವರೇನೂ ಅದಕ್ಕೆ ಕೇರ್ ಮಾಡುವುದಿಲ್ಲ. ಅಷ್ಟಕ್ಕೂ ಅಲ್ಲಿಯೇ ನಿಲ್ಲುವವರಾರು? ಕೆಲವರು ಕಣ್ಣೋ ಕೈಯೋ ತಿರುವಿ ಅಸಮಾಧಾನ ವ್ಯಕ್ತಪಡಿಸುತ್ತಾರಾದರೂ ಕಾರಿನ ಹೊರಗೆ ಬರುವ ಶ್ರಮ ತೆಗೆದುಕೊಳ್ಳುವುದಿಲ್ಲ. ಅವರೆಡೆಗೆ ನೋಡದಿದ್ದರಾಯಿತು. ಇಷ್ಟು ಟ್ರಾಫಿಕ್ಕು ಎಂದ ಮೇಲೆ ತಾಗದೇ ಇರುತ್ತದೆಯೇ ? ಎಲ್ಲರೂ ಸುಮ್ಮನಿರುವಾಗ ಈ ಕಾರಿನವರದೇನು ಮಹಾ ?

ಬೆಂಗಳೂರಿನಲ್ಲಿ ಇಪ್ಪತ್ತೆರಡು ಲಕ್ಷ ಬೈಕುಗಳೂ, ಐದು ಲಕ್ಷ ಕಾರುಗಳೂ ಇವೆಯೆಂಬುದು 2008 ರ ಅಂದಾಜು. ಅಂದರೆ ಕಾರಿನ ನಾಲ್ಕು ಪಟ್ಟು ಬೈಕು ಸವಾರರು ಇದ್ದಾರೆಂದಾಯ್ತು. ಆದರೂ ಇಷ್ಟು ದೊಡ್ಡ ಕಾರಿನಲ್ಲಿ ಒಬ್ಬರೇ ಓಡಾಡುತ್ತ ರಸ್ತೆ ಆಕ್ರಮಿಸುವ ಈ ದೊಡ್ಡ ಮನುಷ್ಯರು ತಮ್ಮ ಜೊತೆಗೆ ಇನ್ನೂ ನಾಲ್ಕು ಜನರನ್ನು ಕರೆದೊಯ್ದರೆ ಬೈಕುಗಳೇ ಇರುವುದಿಲ್ಲ ! ಎಷ್ಟು ಜಾಗ, ಇಂಧನ ಮತ್ತು ದುಡ್ಡು ಉಳಿತಾಯ ನೋಡಿ. ನಾನು ಸುಳ್ಳು ಹೇಳುತ್ತೇನೆಂದು ನಿಮಗನಿಸಿದರೆ ಇವತ್ತು ರಸ್ತೆಯ ಮೇಲೆ ಯಾವುದೇ ಸಿಗ್ನಲ್ಗಳಲ್ಲಿ ನಿಂತ ವಾಹನಗಳನ್ನು ನೋಡಿ. ಬರೀ ಕಾರುಗಳೇ ಕಾಣುತ್ತವೆ. ಒಂದೈವತ್ತು ಸಾವಿರ ಕೈಯಲ್ಲಿದ್ದರೆ ಮುಗಿಯಿತು, ಸಾಲ ಮಾಡಿ ಕಾರಲ್ಲಿ ಜುಮ್ಮಂತ ಓಡಾಡುತ್ತಾರೆ. ದೇಶದ ಬಗ್ಗೆ, ಇತರರ ಬಗ್ಗೆ ಇವರಿಗೆ ಯೋಚನೆಯಿದೆಯೇ ? ಇರುವ ಜಾಗ ಎಲ್ಲ ಕಾರುಗಳಿಗೇ ಬೇಕು. ಬೈಕುಗಳು ಇನ್ನೂ ಇಪ್ಪತ್ತು ಲಕ್ಷಗಳಿದ್ದರೂ ಈ ಕಾರುಗಳಂತೆ ಜಾಗ ತಿನ್ನುವುದಿಲ್ಲ. ಅದನ್ನೇ ಕಾರಿರುವ ಸ್ನೇಹಿತನೊಬ್ಬನೊಂದಿಗೆ ಹೇಳಿದರೆ , "ನೀನು ಬಿಯಂಟೀಸಿ ಬಸ್ಸಿನಲ್ಲಿ ಓಡಾಡಿದರೆ ಇನ್ನೂ ಜಾಗ ಮತ್ತು ಇಂಧನ ಉಳಿಯುತ್ತದೆ, ಗೊತ್ತಾ?" ಎಂದು ಅವನೆಂದ. ಎಷ್ಟು ಸೊಕ್ಕು ನೋಡಿ, ನನ್ನಿಷ್ಟ, ಬೇಕಾದ್ದರಲ್ಲಿ ಓಡಾಡುತ್ತೇನೆ, ಇವನಿಗೇನು ?

ನಿಧಾನಕ್ಕೆ ಹೋಗುತ್ತ ತಾವೂ ಹೋಗದೇ ಉಳಿದವರಿಗೂ ಬೇಗ ಹೋಗಲು ಬಿಡದ ಕಾರಿನವರನ್ನು ಕಂಡರೆ ನನಗೆ ಮೈಯೆಲ್ಲ ಉರಿದುಹೋಗುತ್ತದೆ. ಅದರ ಮಧ್ಯೆಯೇ, ಹೇಳದೆ ಕೇಳದೆ ಕಾರನ್ನು ಎಡಕ್ಕೆ ತೆಗೆದುಕೊಂಡು, ಅವನ ಎಡದಿಂದ overtake ಮಾಡುತ್ತಿದ್ದ ನನ್ನನ್ನು ಒಬ್ಬ almost ಕೆಡವೇ ಬಿಟ್ಟಿದ್ದ. ಬಡ್ಡೀಮಗ, ದುಡ್ಡಿನ ಸೊಕ್ಕು. lane discipline ಇಲ್ಲ. ಅಮೆರಿಕದಿಂದ ತಿರುಗಿ ಬರುತ್ತಾರೆ, ಅಲ್ಲಿ ಹಾಗೆ ಹೀಗೆ ಎನ್ನುತ್ತಾರೆ. ಹಾಗಿದ್ದ ಇವರು ಇಲ್ಲಿಗೆ ಬರುತ್ತಿರುವಂತೆಯೇ ಮತ್ತೆ ಹೀಗೆಯೇ. ಶಿಸ್ತು ಮಾತ್ರ ಅಲ್ಲಿ. ಬರೀ ಬೊಗಳೆ ಇಲ್ಲಿ. ಬೈಕಿನಲ್ಲಿ ಓಡಾಡುವವರನ್ನು ಇಷ್ಟು ಬಾರಿ ಹಿಡಿದು ನಿಲ್ಲಿಸುತ್ತಾರಲ್ಲ, ಪೋಲಿಸರು? ಒಂದಾದರೂ ಕಾರನ್ನು ನಿಲ್ಲಿಸಿ (ಅದರಲ್ಲೂ ದುಬಾರಿ ಕಾರನ್ನು ನಿಲ್ಲಿಸಿ), "ಲೈಸೆನ್ಸ್ ತೋರ್ಸ್ರೀ" ಎನ್ನುತ್ತಾರಾ? ಆರ್ಸೀ ಬುಕ್ಕಂತೆ, ಎಮ್ಮಿಶನ್ನಂತೆ, ಅದಂತೆ ಇದಂತೆ. ಏನಿಲ್ಲವೋ ಅದೇ ಬೇಕು. ಈ ದೇಶ ಎಂದಿಗೂ ಉಧ್ಧಾರವಾಗುವುದಿಲ್ಲ ನೋಡಿ.

ಅಗೋ ಅಲ್ಲಿ ನೋಡಿ, ಸಿಗ್ನಲ್ನಲ್ಲಿ ನಿಂತ ಕಾರಿನಲ್ಲಿ ಎಡಗಡೆ ಸೀಟಿನಲ್ಲಿ ಕುಳಿತ ಬಿಳಿತೊಗಲಿನ ಹುಡುಗಿಯ ವಯ್ಯಾರ. ಕಪ್ಪು ಗ್ಲಾಸು ತೊಟ್ಟು ಘನ ಗಂಭೀರವಾಗಿ ಕೂತಿದ್ದಾಳೆ (ಅದನ್ನೇ ವಯ್ಯಾರ ಅಂದಿದ್ದು!), ಪ್ರಪಂಚವೆಲ್ಲ ಗೊತ್ತು ಅನ್ನುವವರಂತೆ. ದುಬಾರಿ ಕಾರಿನಲ್ಲಿ ಕೂತರೆ ಕಣ್ಣಿಗೆ ಕಪ್ಪು ಗ್ಲಾಸು ಕಡ್ಡಾಯವಿರಬೇಕು. ನಾನು ನೋಡತೊಡಗಿದ ಎರಡು ನಿಮಿಷದ ನಂತರ ನನ್ನೆಡೆಗೆ ನೋಡಿದ ಹುಡುಗಿ ನನ್ನ ಮೇಲೆ ದೃಷ್ಟಿ ಇಟ್ಟಿದ್ದು ಎರಡು ಸೆಕೆಂಡು ಮಾತ್ರ. ಬೈಕೆಂದರೆ ಅಷ್ಟು ತಾತ್ಸಾರ ಅವಳಿಗೆ. ಇವಳ ಪಕ್ಕದಲ್ಲಿರುವವನು ಇವಳನ್ನು ಗಮ್ಯ ಮುಟ್ಟಿಸುವುದರೊಳಗೆ ನಾನು ಮತ್ತೆ ತಿರುಗಿ ಬರಬಲ್ಲೆ, ಅದು ಗೊತ್ತಿಲ್ಲ ಇವಳಿಗೆ.

ಕಾರು ದುಬಾರಿಯಾದಂತೆಲ್ಲ ಅದರಲ್ಲಿರುವ ಹುಡುಗಿಯರು ಮತ್ತೂ ನಾಜೂಕು.

ಏನೇ ಹೇಳಿ, ಕಾರಿನಲ್ಲಿ ಮುಂದೆ ಕೂತ ಇಬ್ಬರನ್ನು ಸೆಕೆಂಡಿನ ಒಂದು ಭಾಗದಲ್ಲಿ ನೋಡಿ, ಅದಕ್ಕಿಂತ ಕಡಿಮೆ ವೇಗದಲ್ಲಿ ಅವರಿಬ್ಬರಲ್ಲಿ ಹುಡುಗಿ ಯಾರೆಂದು ಗುರುತಿಸಿ, ಬಾಕಿ ಉಳಿದ ಸಮಯದುದ್ದಕ್ಕೂ ಅವಳ ನಾಜೂಕು ಅಳೆಯುವುದು ಮಾತ್ರ ಗಮ್ಮತ್ತೇ!

ನನ್ನ ಉಳಿದ ಸ್ನೇಹಿತರೆಲ್ಲ ಆಗಲೇ ಒಬ್ಬೊಬ್ಬರಾಗಿ ಕಾರು ಖರೀದಿಸತೊಡಗಿದ್ದಾರೆ. "ಯಾಕೆ ಬೆಂಗಳೂರಿನ ಧೂಳು, ಹೊಗೆ ತಿನ್ನುತ್ತೀಯ ಮಗಾ?" ಎನ್ನುತ್ತಿದ್ದಾರೆ ನನ್ನ ಬಳಿ. ಇತ್ತೀಚೆಗೆ ಪರಿಚಯವಾದ ಸ್ವಾತಿ, "ನೀವ್ಯಾಕೆ ಇನ್ನೂ ಕಾರು ಖರೀದಿಸಿಲ್ಲ?" ಎನ್ನುತ್ತ ನನ್ನ ಸ್ವಾಟೆ ತಿವಿಯುತ್ತಿದ್ದಾಳೆ. ಅವಳಾಗೇ ಹಾಗೆ ಹೇಳುತ್ತಿರುವಾಗ ಕಾರಿಲ್ಲದೇ ಅವಳನ್ನು ಕಾಫಿಗೆ ಕರೆದೊಯ್ಯಲೂ ನಾಚಿಕೆ. ಮನೆ ಅಡ್ವಾನ್ಸಿಗೆ ಅಂತ ಮಾಡಿದ್ದ ಪರ್ಸನಲ್ ಲೋನು ತೀರುತ್ತಿದ್ದಂತೆ, ಹಾಗೂ ಹೀಗೂ ಒಂದೈವತ್ತು ಸಾವಿರ ಹೊಂದಿಸಿ, ಉಳಿದದ್ದು ಸಾಲ ತೆಗೆದುಕೊಂಡು ಅಂತೂ ನಾನೂ ಒಂದು ಸೆಕೆಂಡ್ ಹ್ಯಾಂಡ್ ಅಲ್ಟೋ ಖರೀದಿಸಿದೆ. ಮೊದಲ ಕಾರು ಹಳೆಯದನ್ನು ತೆಗೆದುಕೊಳ್ಳುವುದೇ ಒಳ್ಳೆಯದಂತೆ. ಒಮ್ಮೆಲೇ ಹೊಸ ಕಾರು, ಅದರಲ್ಲೂ ದುಬಾರಿ ಕಾರು ಕೊಂಡುಕೊಂಡುಬಿಟ್ಟರೆ ಡ್ರೈವಿಂಗ್ ಬರುವುದರೊಳಗಾಗಿ ಕಾರು ಗುಜರಿಯಾಗಿಬಿಡುತ್ತದೆಂದು ಕಾರುಗಳ ಬಗ್ಗೆ ಎಲ್ಲಾ ಗೊತ್ತಿರುವ ನನ್ನ ಸ್ನೇಹಿತರುಗಳು ಹೇಳಿದರು. ಇವರಿಗಿದೆಲ್ಲಾ ಎಲ್ಲಿಂದ ತಿಳಿಯುತ್ತದೋ. ನನಗಂತೂ ನಾನು ಕಾರು ಕೊಳ್ಳುವವರೆಗೆ, ಬೆಂಗಳೂರಿನಲ್ಲೂ ಸೆಕೆಂಡ್ ಹ್ಯಾಂಡ್ ಕಾರು ಮಾರುವ ಸ್ಥಳಗಳೂ ಇರುತ್ತವೆಂದೇ ಗೊತ್ತಿರಲಿಲ್ಲ ನೋಡಿ.

ಪುಣ್ಯಕ್ಕೆ ನನಗೆ ತುಂಬಾ ಒಳ್ಳೇ ವ್ಯಾಪಾರಿ ಸಿಕ್ಕ. ನಾನು ಕೊಂಡ ಕಾರಿಗೆ ಒಂದೇ ಒಂದು scratch ಇಲ್ಲ ನೋಡಿ. accident ಆಗಿಲ್ಲದ್ದು ಅಂತ ಅವನೇ ಹೇಳಿದ. ನನ್ನೆದುರಿಗೇ ಅವನೇ ಮೆಕ್ಯಾನಿಕ್ ಕರೆಸಿ ಪರೀಕ್ಷೆ ಮಾಡಿಸಿದನಲ್ಲ ?

ದರಿದ್ರ ಬೆಂಗಳೂರು. ದರಿದ್ರ ಟ್ರಾಫಿಕ್ಕು.

ಕಾರು ರಸ್ತೆಗಿಳಿದ ಮೊದಲ ದಿನವೇ ಎಡಗಡೆ ಬಾಗಿಲಿನ ಬಳಿ ಒಂದು ಗೀರಾಗೇ ಹೋಯಿತು. ಒಂದು ಬೈಕಿನವನು. ನನಗೆ ಎಲ್ಲ ಹೊಸದು. ಎಡಗಡೆ ಸ್ವಲ್ಪ ಜಾಗ ಬಿಟ್ಟು ಸಿಗ್ನಲ್ ನಲ್ಲಿ ನಿಂತಿದ್ದೆ. ಅದರಲ್ಲೇ ತೂರಿಕೊಂಡು ಹೊರಟ ಬೈಕಿನವನು ಬೈಕಿನ ಹ್ಯಾಂಡಲ್ ಅನ್ನು ಕಾರಿನ ಎಡಗಡೆ ಬಾಗಿಲಿಗೆ ಚೂರು ತಾಗಿಸಿ ನಡೆದೇ ಬಿಡುವುದೇ ? ನಾನು ಬಾಗಿಲು ತೆರೆದು ಹೊರ ಬರುವವರೆಗೆ ಇವನು ಹೇಗಿದ್ದರೂ ಅಲ್ಲಿ ನಿಲ್ಲುವುದಿಲ್ಲ, ಅದಕ್ಕೇ ಒಳಗೇ ಕುಳಿತು ಕುದಿಯತೊಡಗಿದೆ. ಒಂದೂವರೆ ಲಕ್ಷ ಕೊಟ್ಟು (ಅದರಲ್ಲಿ ಒಂದು ಲಕ್ಷ ಬ್ಯಾಂಕಿನವರದ್ದು) ಕಾರು ಖರೀದಿಸಿದ್ದೇನೆ. ಇವನ ಜುಜುಬಿ ಐವತ್ತು ಸಾವಿರದ (ಅದರಲ್ಲಿ ಮೂವತ್ತು ಬ್ಯಾಂಕಿನವರದ್ದು) ಬೈಕನ್ನು ತಾಗಿಸಿ, ನನ್ನತ್ತ ನೋಡದೆಯೇ (ಕೈ ತೋರಿಸಬೇಕೆಂದು ಕಾದಿದ್ದೆ, ದರಿದ್ರದವನು, ನೋಡಲೇ ಇಲ್ಲ) ಹೋಗಿಯೇ ಬಿಟ್ಟ. ಕನಿಷ್ಟ ಪಕ್ಷ, ಮನಃಪೂರ್ತಿ ಬೈದರೆ ಸಮಾಧಾನ. ಅದೂ ಆಗಲಿಲ್ಲವೆಂದರೆ ಮಾತ್ರ ನನಗೆ ತಡೆಯಲಾಗದ ಉರಿ ಏಳುತ್ತದೆ. ಪೂರ್ತಿ ರಕ್ತ ಕುಡಿದ ಸೊಳ್ಳೆ ಹೊಡೆತದಿಂದ ಪಾರಾಗಿ ಹಾರುತ್ತದಲ್ಲ, ಆ ಥರ. ಸೊಳ್ಳೆ ಸತ್ತರೆ ತುರಿಕೆ ಅಷ್ಟಾಗಿ ಬಾಧಿಸದು.

ಸರಿ. ಅವತ್ತಿನಿಂದ ಒಂದು ಬೈಕಿಗಾಗುವಷ್ಟು ಜಾಗ ಬಿಟ್ಟು ನಿಲ್ಲತೊಡಗಿದೆ. ಅದೂ ಪ್ರಯೋಜನವಾಗಲಿಲ್ಲ. ಒಂದು ಬೈಕಿನ ಜಾಗದಲ್ಲಿ ಎರಡು ಬೈಕಿನವರು ಒಟ್ಟಿಗೇ ನುಗ್ಗಿ ಎಡಗಡೆಯ ಹಿಂದಿನ ಬಾಗಿಲಿಗೆ ಗೀರಾಯಿತು. ಸರಿ, ಜಾಗವೇ ಬಿಡಬಾರದೆಂದು ನಿರ್ಧರಿಸಿ, ಪೂರ್ತಿ ಫೂಟ್ ಪಾತಿಗೆ ತಾಗಿಸಿದಂತೆ ನಿಲ್ಲಿಸತೊಡಗಿದೆ. ಎರಡು ದಿವಸ ನಡೆಯಿತು. ಮೂರನೇ ದಿನ ಲೆಕ್ಕಾಚಾರ ತಪ್ಪಿ ಕಾರಿನ ಬಂಪರಿಗೆ ಫೂಟ್ ಪಾತ್ ಪಕ್ಕದ ಕಲ್ಲು ತಾಗಿಯೇ ಹೋಯಿತು. ದರಿದ್ರ ದೇಶ, ದರಿದ್ರ ಸರ್ಕಾರ, ರಸ್ತೆಯಲ್ಲಿ ಕಲ್ಲು ಬಿಡುವುದೇ? ನಾವೇನು ತೆರಿಗೆ ಕಟ್ಟುವುದಿಲ್ಲವಾ? ಈಗ ಕಾರಿನ ರಿಪೇರಿಗೆ ಸರ್ಕಾರದವರು ಕೊಡುತ್ತಾರಾ? ಈ ಸರ್ಕಾರ, ಈ ಬೈಕಿನವರು ಇಬ್ಬರೂ ಮಾತನಾಡಿಕೊಂಡಂತಿದೆ. ಈಗಂತೂ ಹೆಲ್ಮೆಟ್ ಕಡ್ಡಾಯವಾಗಿದೆಯಲ್ಲ? ಎಲ್ಲ ಬೈಕಿನವರೂ ಒಂದೇ ಥರ ಕಾಣುತ್ತಾರೆ, ಸೈನಿಕರಂತೆ. ನಾವೆಲ್ಲ (ಕಾರಿನವರು)ಸಿಗ್ನಲ್ಲಿಗೆ ನೀಟಾಗಿ ನಿಂತು ಕಾಯುತ್ತಿದ್ದರೆ, ನಡುವೆ ತೂರಿಕೊಂಡು ಹೇಗೆ ಮುಂದೆ ಹೋಗಿ ನಿಲ್ಲುತ್ತಿದ್ದಾರೆ ನೋಡಿ. ಒಂದು ಇಂಚು ಸಿಕ್ಕರೆ ಮುಗಿಯಿತು, ಒಬ್ಬರ ಹಿಂದೆ ಒಬ್ಬರು ಪುರು ಪುರು. ಇವರಿಗೆ ಯಾಕೆ lane ಕಾಯ್ದೆ ಇಲ್ಲ ? ನಾನೇ ಪೋಲೀಸಾಗಿದ್ದರೆ ಹೀಗೆ ತೂರಿಕೊಂಡು ಹೋಗುವವರ ಕೀ ತೆಗೆದು ಬಿಸಾಡಿ, 'ಈಗ ಹೆಕ್ಕಿಕೊಂಡು ಹೋಗಿ' ಎಂದು ಗಹಗಹಿಸಿಬಿಡುತ್ತಿದ್ದೆ. ಪೋಲೀಸರಿಗೆ ನರ ಇಲ್ಲ.

ಒಂದಿನ ಬಾಗಿಲು, ಇನ್ನೊಂದು ದಿನ ಕಾರಿನ ಮಿರರ್ರು. ಕಾರಿನ ಕನ್ನಡಿಯನ್ನು ವಾರೆ ಮಾಡಿ ಹೊರಟು ಹೋಗುತ್ತಾರೆ. ಆಮೇಲೆ ನಾನು ಕಾರಿನ ಗ್ಲಾಸಿಳಿಸಿ ಅದನ್ನು ಸರಿಪಡಿಸಿಕೊಳ್ಳಬೇಕು.

ಕಾರನ್ನು overtake ಮಾಡಿ ಮತ್ತೆ ಸೀದಾ ಕಾರಿನ ಮುಂದಕ್ಕೇ ವಾರೆಯಾಗಿ ಬರುತ್ತಾರೆ. ಇವರನ್ನು ಕಾಪಾಡಲು ನಾನು ಬ್ರೇಕ್ ಹಾಕಬೇಕು. ಇವರ ಜೀವ ಉಳಿಸುತ್ತೇನೆಂದು ನಾನೇನು ವಾಗ್ದಾನ ನೀಡಿದ್ದೇನೆಯೇ? ಶಿಸ್ತೇ ಇಲ್ಲ ದ್ರಾಬೆಗಳಿಗೆ.

ಬೈಕಿನಲ್ಲಿ ಬೇಗ ಆಫೀಸು ತಲುಪಬಹುದು ಅಂತ ನನ್ನ ಸಹೋದ್ಯೋಗಿಯೊಬ್ಬ ಇವತ್ತು ವಾದಿಸುತ್ತಿದ್ದ. ಅವನಿಗೇನು ಗೊತ್ತು ಕಾರಿನ ಸುಖ? ಅಷ್ಟಕ್ಕೂ ಬೇಗ ತಲುಪಬಹುದು ಅಂತ ಅವನು ತಿಳಿದುಕೊಂಡಿದ್ದಾನೆ ಅಷ್ಟೆ. ಇಷ್ಟೆಲ್ಲ ಗಡಿಬಿಡಿಯಿಂದ ಯಾರದೋ ಜೀವ ಕಾಪಾಡಲು ಹೊರಟವರಂತೆ ರುಂಯ್ ಎಂದು ಹೋಗುತ್ತಾರಲ್ಲ, ಇವರೆಷ್ಟು ದೂರ ಹೋಗಿರುತ್ತಾರೆಂದುಕೊಂಡಿರಿ? ಇಲ್ಲೇ ಮುಂದಿನ ಸಿಗ್ನಲ್ಲಿನಲ್ಲಿ ಮುಂದಿನ ಸಾಲಿನಲ್ಲಿ ನಿಂತಿರುತ್ತಾರೆ. ಇಷ್ಟಕ್ಕೆ ಇಷ್ಟು ಅವಸರವೇ? ಒಬ್ಬ ಒಂದು ಇರುಕಿನಲ್ಲಿ ಹೊರಟರೆ ಮುಗಿಯಿತು, ಸೈಡಿನಲ್ಲಿ ನಿಂತವನಿಗೆ ತುರಿಕೆ ಶುರು. ಅವನು ಹಾಗೆ ತಿರುಗಿಸಿ, ಹೀಗೆ ತಿರುಗಿಸಿ, ಅಲ್ಲೇ ಒಂದು ಕಾರಿಗೆ ಚೂರು ತಾಗಿಸಿ, ಅದೇ ಇರುಕಿನಲ್ಲಿ ಹೊರಡುತ್ತಾನೆ. ಬೈಕಿನವರು ಒಬ್ಬರಿಗೊಬ್ಬರು ತಾಗಿಸಿಕೊಂಡರೆ ಜಗಳ ಇಲ್ಲ, ಏನಿಲ್ಲ. ಒಂದು ಮುಗುಳ್ನಗೆ ಮತ್ತು ವಿಶ್ವಭಾತೃತ್ವ. ಅದೇ ಕಾರಿನವನು ಬೈಕಿಗೆ ತಾಗಿಸಲಿ, ಜಗತ್ತಿನ ಶ್ರೀಮಂತರೆಲ್ಲ ಬಡವರ ರಕ್ತ ಹೀರಲೇ ನಿಂತಿದ್ದಾರೆಂಬಂತೆ ಒಟ್ಟಾಗಿ ನಿಂತು ಜಗಳ ಕಾಯುತ್ತಾರೆ. ಕಾರಿದ್ದರೆ ಶ್ರೀಮಂತರೇ? ಕಾರಿನ ಸಾಲ ಯಾರು, ಇವರಪ್ಪಂದಿರು ತೀರಿಸುತ್ತಾರೆಯೇ?

ಹ್ಯಾಗೆ ನಾಚಿಕೆಯಿಲ್ಲದೆ ಕಾರಿಗೆ ಕೈ ಮಾಡಿ ಲಿಫ್ಟ್ ಕೇಳುತ್ತಾರೆ ಜನ ನೋಡಿ! ನಾನೇನು ಒಂದೂವರೆ ಲಕ್ಷ (ಐವತ್ತು ಸಾವಿರ) ಕೊಟ್ಟು ಕಾರು ಖರೀದಿಸಿದ್ದು ಕಂಡವರನ್ನೆಲ್ಲ ಕರೆದೊಯ್ಯಲೆಂದೇ? ಇವರದ್ದು ಅತಿಯಾಯಿತು.

ಬಿಡಿ, ಇವರ ರಾಮಾಯಣ ಇದ್ದಿದ್ದೇ. ಅಂತೂ ಧೈರ್ಯ ಮಾಡಿ ಸ್ವಾತಿಯನ್ನು ಕಾಫಿಗೆ ಕರೆದೆ ನೋಡಿ! ಅವಳೇನೂ ಇದು ಮಾಡಲಿಲ್ಲ, ಪಾಪ. ಈಗ ದಿನಾಲೂ ನನ್ನ ಜೊತೆಗೆ ಕಾರ್ ಪೂಲಿಂಗ್ ಮಾಡುತ್ತಾಳೆ (ಅಂದರೆ...ಪೂರ್ತಿ ಹಾಗಲ್ಲ, ಅವಳತ್ರ ಕಾರೇನೂ ಇಲ್ಲ, ದಿನಾಲೂ ನನ್ನ ಕಾರೇ. ಆದ್ರೂ ನಂಗೇನೂ ತೊಂದ್ರೆ ಇಲ್ಲ ಬಿಡಿ). ಆಮೇಲೊಂದು ದಿನ ನಾನೇ ಅವಳಿಗೆ ಒಂದು ಗಾಗಲ್ ಕೊಡಿಸಿದೆ. ರೇಬಾನ್ ಕಂಪನೀದು ಚೆನ್ನಾಗಿರುತ್ತದಂತಲ್ಲ? ಹಾಗಂತ ಅವಳೇ ಹೇಳಿದಳು. ಮತ್ತೆ ಕಾರಲ್ಲಿ ಕೂರುವಾಗ ಜಾತ್ರೆಯಲ್ಲಿ ಸಿಗುವ ಕನ್ನಡಕ ಹಾಕಲಾದೀತೆ? ಅದರಲ್ಲೂ ಸ್ವಾತಿ? ಕಪ್ಪು ಗ್ಲಾಸು, ಮೂರು ಸಾವಿರದ್ದು. ಅದಕ್ಕೆಲ್ಲ ಅಷ್ಟಿರುತ್ತದೆ ಎಂದು ತಿಳಿದದ್ದೂ ಅವತ್ತೇ.

ಅದೋ ನೋಡಿ ಇವರೆ. ಬೈಕಿನವನು ಸಿಗ್ನಲ್ಲಿನಲ್ಲಿ ಸೈಡಿನಲ್ಲಿ ನಿಂತವನು ಸ್ವಾತಿಯನ್ನು ಹ್ಯಾಗೆ ಗುರಾಯಿಸುತ್ತಿದ್ದಾನೆ(ಇವನ ಮುಂದೆ ಆಗಲೇ ನೂರು ಜನ ಬೈಕಿನವರು ನಿಂತಿದ್ದಾರಲ್ಲ, ಅದಕ್ಕೇ ಇವನು ಇಲ್ಲೇ ನಿಂತಿದ್ದು, ಇಲ್ಲವಾದರೆ, ಅಲ್ಲಿ, ಮುಂದಿನ ಸಾಲಿನಲ್ಲಿ ನಿಂತಿರುತ್ತಿದ್ದ). ಮುಸುಡಿಗೆ ಒಂದು ಕೊಟ್ಟು ಬಿಡೋಣ ಅನ್ನಿಸುತ್ತಿದೆ. ಅವತ್ತೇ ಕಾರಿನ ಗ್ಲಾಸಿಗೂ ಕಪ್ಪು ತೊಡಿಸಿಯಾಯಿತು. ಎರಡು ಸಾವಿರ ಖರ್ಚಾಯಿತು. ಈಗ ಇವರದ್ದು ಹೊಸ ನಾಟಕ. ಬೈಕಿನ ಹಿಂದಿನ ಸೀಟಿನಲ್ಲಿ ಕೂತ ಗಡವ ನನ್ನ ಕಾರಿನ ಗ್ಲಾಸಿನಲ್ಲಿ ಮೂತಿ ನೋಡಿಕೊಂಡು ಕೂದಲು ಸರಿಪಡಿಸಿಕೊಳ್ಳುತ್ತಿದ್ದಾನೆ.

ನಾನ್ಯಾವತ್ತೂ ನೋಡದ ಘಟನೆ ಇವತ್ತು ನಡೆಯಿತು. ಪೋಲೀಸನೊಬ್ಬ ನೋಡಿ ಕಾರು ನಿಲ್ಲಿಸಿ, "ಎಮಿಶನ್ ರಿಪೋರ್ಟ್ ತೋರ್ಸಿ ಸಾರ್" ಎಂದ (ಮೊದಲಾದರೆ "ತೋರ್ಸ್ರೀ" ಎನ್ನುತ್ತಿದ್ದ, ಕಾರಿದ್ದರಿಂದ, "ಸಾರ್" ಎನ್ನುತ್ತಿದ್ದಾನೆ) ಕಾರಿಗೂ ಎಮಿಶನ್ ಸರ್ಟಿಫಿಕೇಟ್ ಬೇಕಾಗುತ್ತದೆ ಎಂದು ನನಗೆ ಗೊತ್ತು, ಆದರೆ ಪೋಲಿಸರು ಕೇಳುತ್ತಾರೆ ಅಂತ ಗೊತ್ತಿಲ್ಲ. "ನೂರು ರೂಪಾಯಿ ಕೊಟ್ಟು ಹೋಗಿ ಸಾರ್" ಎನ್ನುತ್ತಿದ್ದಾನೆ. ಸರಿ, ನೂರು ರೂಪಾಯಿ ಲಂಚಕ್ಕೆಂದು ಹೋಯಿತು. (ಪಾವತಿ ತೆಗೆದುಕೊಂಡು ದಂಡ ಕಟ್ಟಿದ್ದರೂ ನೂರೇ ರೂಪಾಯಿ ಎಂದು ತುಂಬಾ ದಿನದ ನಂತರ ಯಾರೋ ಹೇಳಿದರು) ಅಮೆರಿಕದಲ್ಲೆಲ್ಲ ಹೀಗೆ ಲಂಚ ತೆಗೆದುಕೊಂಡು, ಜನರನ್ನು ಬಿಡುವುದಿಲ್ಲ, ಇವ್ರೆ. (ನಾನ್ಯಾವತ್ತೂ ಅಮೆರಿಕಕ್ಕೆ ಹೋಗಿಲ್ಲ, ಅಲ್ಲಿ ಹಾಗೆಂದು ಕೇಳಿದ್ದೇನೆ) ಅಲ್ಲಿಯ ಪೋಲೀಸರ ಕೈಲಿ ಎಂತೆಂಥ ಸಾಧನಗಳಿರುತ್ತವೆ, ಏನು ಕಥೆ! ಇವರು ಅವರಂತಾಗಲು ಇನ್ನೂ ಶತಮಾನಗಳೇ ಬೇಕು. ಈ ದೇಶ ಯಾವತ್ತಿದ್ದರೂ ಉದ್ಧಾರವಾಗುವುದಿಲ್ಲ ಬಿಡಿ.

ಇದಾದ ಮರುದಿನವೇ ರಿಂಗ್ ರೋಡಲ್ಲಿ ಅತಿವೇಗ ಅಂತ ನಿಲ್ಲಿಸಿದರು. ರಿಂಗ್ ರೋಡಲ್ಲಿ ಅರವತ್ತು, ವೇಗದ ಮಿತಿಯಂತೆ. ನನಗೇನು ಗೊತ್ತು? ಬೋರ್ಡಿಲ್ಲ, ಸುಡುಗಾಡಿಲ್ಲ (ಬೋರ್ಡಿತ್ತು ಅಂತ ಮರುದಿನ ನೋಡಿದೆ). ನಾನು ಎಪ್ಪತ್ತು ಸ್ವಲ್ಪ ದಾಟಿದ್ದೆ, ಅಷ್ಟಕ್ಕೇ ನಿಲ್ಲಿಸಿ ಬಿಡುವುದೇ? ಸ್ಪೀಡು ಅಳೆಯುವ ಸಾಧನ ಭಾರತದಲ್ಲಿ, ಅದೂ ಬೆಂಗಳೂರು ಪೋಲೀಸರ ಕೈಗೆ ಸಿಕ್ಕಿದೆ ಎಂಬುದೇ ನನಗೆ ಗೊತ್ತಿರಲಿಲ್ಲ. ಮುನ್ನೂರು ದಂಡ ಅಂತ ಪೋಲಿಸಿನವನು ರಾಗ ಎಳೆದ. "ನೂರು ತಗೊಂಡು ಬಿಡಿ ಸಾರ್" ಎಂದೆ. "ಇಲ್ಲ ಸಾರ್ ಮುನ್ನೂರು ದಂಡ ಕಟ್ಟಿ ಹೋಗಿ" ಎಂದ. ಇವನಜ್ಜಿ, ನೂರು ರೂಪಾಯಿ ತೆಗೆದುಕೊಂಡು ನನ್ನನ್ನು ಬಿಟ್ಟರೆ ಇವನ ಗಂಟೇನು ಹೋಗುತ್ತಿತ್ತು? ಸತ್ಯ ಹರಿಶ್ಚಂದ್ರನ ಮೊಮ್ಮಗನಂತಾಡುತ್ತಿದ್ದಾನೆ. ಕೈಯಲ್ಲಿ ಇರುವ ಮೊಬೈಲಿನಲ್ಲಿ ನನ್ನ ವಾಹನದ ಪೂರ್ತಿ ಚರಿತ್ರೆ ತೆಗೆಯುತ್ತಿದ್ದಾನೆ. ಅದೆಲ್ಲ ಬಂತೆ ಇವರ ಕೈಗೆ? ಈಗೀಗ ಅತಿಯಾಗುತ್ತಿದೆ. ಕಾರನ್ನೂ ಬಿಡದೇ ನಿಲ್ಲಿಸಿ ದಂಡ ಪೀಕುತ್ತಿದ್ದಾರೆ. ಬೈಕಿನವರಿಗೇನು ಬರಗಾಲವೇ? ಈ ದೇಶ ಯಾವತ್ತಿಗೂ ಉದ್ಧಾರವಾಗುವುದಿಲ್ಲ ನೋಡಿ.

4 comments:

sunaath said...

ಹಾಹಾಹಾ, ಸುಪ್ತವರ್ಣ, ತುಂಬ ಚೆನ್ನಾಗಿದೆ ನಿಮ್ಮ bike-car ಹರಟೆ. ನಾನಾದರೋ ಬಸ್ಸಿನಲ್ಲೇ ಅಡ್ಡಾಡೋನು. ಅದಕ್ಕೇ bike ಹಾಗೂ car ಇಬ್ಬರನ್ನೂ ಬೈತಾ ಇರ್ತೀನಿ. ಅಂದ ಹಾಗೇ ನನ್ನ ಜೊತೆಗೆ coffee ಕುಡಿಯೋಕೆ ಯಾವ ಹುಡುಗಿಯೂ ಬರೋದಿಲ್ಲ!

ಸಾಗರದಾಚೆಯ ಇಂಚರ said...

ಸಪ್ತವರ್ಣ
ನಿಮ್ಮ ಚಕ್ರದಿಂದ ಚಕ್ರದ ಕಥೆ ಮಜವಾಗಿದೆ
ಬೆಂಗಳೂರಿನ ಟ್ರಾಫಿಕ್ಕು ಎಂಥವರಿಗೂ ಅಸಹ್ಯ ಹುಟ್ಟಿಸುತ್ತದೆ

ಸುಪ್ತವರ್ಣ said...

ಸುನಾಥ ಸರ್, ಕಾರು ನೋಡಿ ಕಾಫಿಗೆ ಬರುವವರು ಬೇಡ ಅಂತ ತಾನೇ ನೀವು ಬಸ್ಸಿನಲ್ಲಿ ಪ್ರಯಾಣಿಸುವುದು? ಅಂದಮೇಲೆ ನಿಮಗೆ ಬೇಕಾದಂಥವರು ನಿಮ್ಮ ಜೊತೆಗಿದ್ದಾರೆಂದಾಯ್ತು! ಪ್ರೋತ್ಸಾಹಕ್ಕೆ ಧನ್ಯವಾದಗಳು :-)


ಗುರುಮೂರ್ತಿಗಳೇ, ಮೆಚ್ಚಿದ್ದಕ್ಕೆ ಖುಷಿಯಾಯ್ತು!

Manjunatha Kollegala said...

ಅಂದಹಾಗೆ ಏಕ್ ದಂ ಎರಡರಿಂದ ನಾಲ್ಕು ಚಕ್ರಕ್ಕೆ ಹಾರಿ ಆಟೋರಾಜರಿಗೆಲ್ಲಾ ಅಸಮಾಧಾನ ಮಾಡಿಬಿಟ್ಟಿರಿ. ಗಾದೆಯೇ ಇದೆ ಬೈಕಿನ ಹಿಂದೆ ನಿಲ್ಲಬೇಡ, ಲಾರಿ ಪಕ್ಕ ನಿಲ್ಲಬೇಡ, ಆಟೋ ಇದ್ರೆ ಮಾತ್ರ ಸುತ್ತ ಮುತ್ತ ಎಲ್ಲೂ ನಿಲ್ಲಲೇ ಬೇಡ ಅಂತ :)

ಸೊಗಸಾಗಿದೆ ಚಕ್ರಲಹರಿ; ಖುಶಿಯಾಯಿತು.