Saturday, February 13, 2010

ತಲೆಬುಡವಿಲ್ಲದ್ದು

ಇದು  ನಿನ್ನೆ ಬೆಳಿಗ್ಗೆ ನಡೆದಿದ್ದು.

ಸರಕಾರದವರು ಹೊಸದಾಗಿ ಮಾಡಿರುವ ರಸ್ತೆ. ಹೊಸ ರಸ್ತೆಗಳು ಅಪರೂಪವಾದ್ದರಿಂದ ಜನ ಸ್ವಲ್ಪ ವೇಗವಾಗಿಯೇ ಚಲಿಸುತ್ತಾರೆ. ಅದು ಗೊತ್ತಿರುವುದರಿಂದಲೇ, ಸರಿಯಾಗಿ, ತಿರುವು ಇರುವ ಕಡೆ ಒಂದು 'ಹಂಪ್' ಇಟ್ಟಿದ್ದಾರೆ. ಅದು ಇರುವ ಜಾಗದಲ್ಲಿಯೇ ಇವತ್ತು ಕಾಲು ಸ್ವಲ್ಪ ಊನವಿರುವ ವ್ಯಕ್ತಿಯೊಬ್ಬ 'ಲಿಫ್ಟ್' ಗಾಗಿ ಕೈ ತೋರಿಸುತ್ತ ನಿಂತಿರುವುದು ಕಾಣಿಸಿತು.



ಹಿಂದೆ ನಾನು ಬೈಕ್ ಓಡಿಸುತ್ತಿದ್ದಾಗ ಹೀಗೆ ಲಿಫ್ಟ್ ಕೇಳುತ್ತಿದ್ದ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದೆ. ಅದರಲ್ಲೂ ಎಷ್ಟೋ ಸಿವಿಲ್ ಮತ್ತು ಟ್ರಾಫಿಕ್ ಪೋಲೀಸರಿಗೆ ಸಾಕಷ್ಟು ಬಾರಿ ಲಿಫ್ಟ್ ಕೊಟ್ಟಿದ್ದೇನೆ. ಆಮೇಲಾಮೇಲೆ ಪೇಪರಿನಲ್ಲಿ ಬರುತ್ತಿದ್ದ ಕೆಟ್ಟ ಸುದ್ದಿಗಳನ್ನು ಓದಿ ಲಿಫ್ಟ್ ಕೊಡುವುದನ್ನು ನಿಲ್ಲಿಸಿದೆ. ಅದರಲ್ಲೂ ಕಾರು ತೆಗೆದುಕೊಂಡ ಮೇಲೆ ಪೂರ್ತಿ ನಿಲ್ಲಿಸಿದ್ದೇನೆ. ಆಗಂತುಕರನ್ನು ಮನೆಯಲ್ಲಿ ಬಿಟ್ಟುಕೊಳ್ಳುವುದಕ್ಕೂ, ಕಾರಿನಲ್ಲಿ ಬಿಟ್ಟುಕೊಳ್ಳುವುದಕ್ಕೂ ಅಂಥ ವ್ಯತ್ಯಾಸವಿಲ್ಲವೆಂದು ನನ್ನ ಅಭಿಪ್ರಾಯ.

ಯಾವ ಕ್ಷಣದಲ್ಲಿ ಏನು ಯೋಚಿಸಿ ಯಾಮಾರಿದೆನೋ ಈಗ ನೆನಪಿಲ್ಲ. ಬಹುಶಃ ಆತ ಅಂಗವಿಕಲನಾದ್ದರಿಂದ ಇರಬಹುದು.  ಹತ್ತಿರವಾಗುತ್ತಿದ್ದಂತೆ ಕಾರು ನಿಲ್ಲಿಸಿ, ಎಡಗಡೆಯ ಬಾಗಿಲು ತೆರೆದು, "ಎಲ್ಲಿಗೆ ಹೋಗಬೇಕು?" ಎಂದೆ.

ಅದು ಕೇಳಿಸಲಿಲ್ಲವೇನೋ, "ಕನ್ನಡ ಬರುತ್ತಾ ಸಾರ್?" ಎಂದು ನನ್ನನ್ನು ಕೇಳಿದ.

"ಹೌದು, ಹೇಳಿ", ಎಂದೆ.

"ನನಗೆ ಲಿಫ್ಟ್ ಬೇಡ ಸಾರ್, ತುಂಬಾ ತೊಂದರೆಯಲ್ಲಿದ್ದೇನೆ, ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ. ನನಗೆ ಸ್ವಲ್ಪ ಸಹಾಯ ಬೇಕಿತ್ತು", ಎಂದ.

ನಾನು ಅನುಮಾನದಿಂದಲೇ, "ಏನು ಸಹಾಯ ಬೇಕು?", ಎಂದೆ.

ಆತ ಮತ್ತೆ ತನ್ನ ಹಿಂದಿನ ವಾಕ್ಯದಿಂದಲೇ ಶುರುಮಾಡಿದ, "ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ ಸಾರ್. ತುಂಬಾ ಹಣಕಾಸಿನ ತೊಂದರೆಯಲ್ಲಿದ್ದೇನೆ. ಮಗನ ವಿದ್ಯಾಭ್ಯಾಸ ಇತರೆ ತೊಂದರೆಗಳಿವೆ. ಫೀಸೂ ಕಟ್ಟಿಲ್ಲ, ತಮ್ಮ ಕೈಲಾದ ಸಹಾಯ ಮಾಡಿದ್ದರೆ ಚೆನ್ನಾಗಿತ್ತು. ಮತ್ತೆ.....ನಾನು ಭಿಕ್ಷೆ ಬೇಡುತ್ತಿಲ್ಲ ಸಾರ್", ಎಂದ.

ಲಿಫ್ಟ್ ಕೊಡಲು ಹಾಗೂ ಹೀಗೂ ಮಾನಸಿಕವಾಗಿ ತಯಾರಿದ್ದ ನಾನು ಈ ಹೊಸ ಬೇಡಿಕೆಗೆ ಕೊಂಚ ಗಾಬರಿಯಾದೆ. ಯಾರೋ ಏನೋ ಗೊತ್ತಿಲ್ಲ. ನನಗೆ ಅವನಲ್ಲಿ ನಂಬಿಕೆಯೂ ಹುಟ್ಟಲಿಲ್ಲ. ಹಾಗೆಂದು ಆತ ಲಫಂಗನಂತೆಯೂ ಕಾಣಿಸಲಿಲ್ಲ. ಅದೇ ಗೊಂದಲದಲ್ಲಿಯೇ, "sorry" ಎಂದು ಬಾಗಿಲೆಳೆದುಕೊಂಡೆ. ಆ ಕ್ಷಣದ ಮಟ್ಟಿಗೆ ನಾನು ವಿಚಾರ ಮಾಡಿದ್ದು ಅಷ್ಟೇ. ನಾನು ಬಾಗಿಲು ಮುಚ್ಚುವ ಮೊದಲು ಆತ, "ದೇವರು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ, ಆತನಿದ್ದಾನೆ ಹೋಗಿ", ಎಂದದ್ದು ಕೇಳಿಸಿತು.

ನಾನು ದೇವರನ್ನು ನಂಬುವುದಿಲ್ಲ. ಆದ್ದರಿಂದ ಭಕ್ತರು ಹಾಕುವ ಶಾಪ ನನ್ನನ್ನು ತಟ್ಟುವುದಿಲ್ಲ. ಹಾಗೆಂದು ಆತ ಕೊನೆಯಲ್ಲಿ ಅಂದ ಮಾತು ಮಾತ್ರ ನನ್ನನ್ನು ತಟ್ಟದೇ ಹೋಗಲಿಲ್ಲ.

ಅಲ್ಲಿಂದ ಹೊರಡುತ್ತ ಕಾರಿನ ಮಿರರಿನಲ್ಲಿ ಆತನನ್ನು ನೋಡಿದೆ. ಆತ ಕುಸಿದು ಕುಳಿತಿದ್ದು ಕಾಣಿಸಿತು. ನನಗೆ ಅಯ್ಯೋ ಅನಿಸಿತು. ಯಾರಿಗೆ ಗೊತ್ತು? ನಿಜವಾಗಿಯೂ ತೊಂದರೆಯಲ್ಲಿರುವವನಾದರೆ? ಅದೇ ಹತಾಶೆಯಲ್ಲಿ ಏನಾದರೂ ಮಾಡಿಕೊಂಡರೆ? ಆಗ ಆತನ ಮಗನ ವಿದ್ಯಾಭ್ಯಾಸದ ಗತಿಯೇನು? ಆತನಿಗೆ ಇನ್ನೇನೇನು ತೊಂದರೆಗಳಿವೆಯೋ? ಯೋಚಿಸುತ್ತಿದ್ದಂತೆ ಯಾಕೋ ನಾನು ಮಾಡಿದ್ದು ಸ್ವಲ್ಪ ಕ್ರೂರವಾಯಿತು ಅನಿಸತೊಡಗಿತು. ಸ್ವಲ್ಪ ಮುಂದೆ ಬಂದು ಡಿವೈಡರ್ ಪಟ್ಟಿ ಮುಗಿಯುತ್ತಿದ್ದಂತೆ, 'U' ಟರ್ನ್ ತೆಗೆದುಕೊಂಡೆ. ಮತ್ತೆ ಆತನಿರುವ ದಿಕ್ಕಿಗೇ ಚಲಿಸತೊಡಗಿದೆ. ಆತ ನಿಂತಿರುವ ಜಾಗದಲ್ಲಿ ರಸ್ತೆ ಇಕ್ಕಟ್ಟಾಗಿರುವುದರಿಂದ ಅಲ್ಲಿ ಕಾರನ್ನು ತಿರುಗಿಸಲು ಸಾಧ್ಯವಿಲ್ಲದೆ, ಇನ್ನೂ ಸ್ವಲ್ಪ ಮುಂದೆ ಬಂದು ಮತ್ತೊಮ್ಮೆ 'U' ಟರ್ನ್ ತೆಗೆದುಕೊಂಡು ಕಾರು ನಿಲ್ಲಿಸಿಕೊಂಡೆ. ಕಾರಿನಲ್ಲಿರುವ ಪೆನ್ನು ಮತ್ತು ಪೇಪರನ್ನು ಹೊರತೆಗೆದೆ. ಪೇಪರ್ ಇಟ್ಟುಕೊಳ್ಳಲು ಏನಾದರೂ ಬೇಕಲ್ಲ? ಹಳೇ CD ಕವರನ್ನು ಹೊರತೆಗೆದೆ. ಮತ್ತೆ ಆತನಿದ್ದಲ್ಲಿಗೇ ಬಂದೆ.

'ಇವನು ಮತ್ತೆ ಯಾಕಪ್ಪ ಬಂದ?' ಎಂದು ಗೊಣಗಿದ್ದು ಆತನ ತುಟಿ ಚಲನೆಯಿಂದ ನನಗೆ ಕಾಣಿಸಿತು (ಅಥವಾ ನನಗೆ ಹಾಗನ್ನಿಸಿತು)

ಕಾರು ನಿಲ್ಲಿಸುತ್ತಿದ್ದಂತೆ ಅವನೇ ಎಡಗಡೆಯ ಬಾಗಿಲು ತೆರೆದ. ನಾನು ಅವನೆಡೆಗೆ ಪೇಪರ್ ಮತ್ತು ಪೆನ್ನನ್ನು ಚಾಚಿ, "ನೋಡಿ ಸಾರ್, ನಿಮ್ಮ ಅಡ್ರೆಸ್ ಕೊಡಿ, ನಿಮ್ಮ ತೊಂದರೆಯ ಬಗ್ಗೆ ನಂತರ ನಿಮ್ಮನ್ನು ಕಾಣುತ್ತೇನೆ" ಎಂದೆ.

ಆತ ಸಿಟ್ಟಿನಲ್ಲಿದ್ದ, "ಬಿಡಿ ಸಾರ್, ನಾನು ಮೋಸಗಾರ, ವಂಚಕ. ನೀವೇನೂ ಸಹಾಯ ಮಾಡಬೇಕಿಲ್ಲ, ನನ್ನ ಕಷ್ಟ ನಾನು ನೋಡಿಕೊಳ್ಳುತ್ತೇನೆ. ನೀವು ಹೊರಡಿ", ಎಂದ.

"ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಬೆಂಗಳೂರಿನಲ್ಲಿ ಎಂತೆಂಥವರಿದ್ದಾರೆ ಎಂದು ನಿಮಗೂ ಗೊತ್ತು. ಹಾಗಾಗಿ ಒಂದು ಕ್ಷಣ ಬೇರೆ ವಿಚಾರ ಮಾಡಿದೆ. ತಪ್ಪು ತಿಳಿಯಬೇಡಿ, ನಿಮ್ಮ ಕಷ್ಟಕ್ಕೆ ಖಂಡಿತ ನಾನು ಸಹಾಯ ಮಾಡಬಲ್ಲೆ" ಎಂದೆ.

"ಏನೂ ಬೇಡ, ನನ್ನ ಕಷ್ಟ ನಾನೇ ನೋಡಿಕೊಳ್ಳುತ್ತೇನೆ, ನಿಮ್ಮ ಸಹಾಯ ಏನೂ ಬೇಡ", ಎಂದ.

ಅವನೇಕೋ ವಿಳಾಸ ಕೊಡಲು ತಯಾರಿರಲಿಲ್ಲ. ನಿಜಕ್ಕೂ ತೊಂದರೆಯಲ್ಲಿರುವವನಾದರೆ ವಿಳಾಸ ಕೊಟ್ಟರೇನು ತೊಂದರೆ? ಆತನ ಮಗನ ವಿದ್ಯಾಭ್ಯಾಸಕ್ಕೆ ನಾನು ಖಂಡಿತ ಸಹಾಯ ಮಾಡಬಲ್ಲೆ. ಪೂರ್ತಿ ನನ್ನಿಂದಾಗದಿದ್ದರೆ, ನನ್ನಂಥದೇ ಮನಸ್ಸಿನ ಇನ್ನೂ ಮೂರ್ನಾಲ್ಕು ಜನರನ್ನು ಖಂಡಿತ ನನ್ನೊಂದಿಗೆ ಸೇರಿಸಬಲ್ಲೆ. ಸಹಾಯ ನಾನು ಮಾಡುವವನಾದ್ದರಿಂದ ಆತ ಅಸಲಿಯೋ ನಕಲಿಯೋ ತಿಳಿದುಕೊಳ್ಳುವ ಹಕ್ಕಂತೂ ನನಗಿದ್ದೇ ಇದೆ. ಆತ ಅದಕ್ಕೂ ತಯಾರಿಲ್ಲದಿದ್ದರೆ ಹೇಗೆ?

ನಾನು ಮತ್ತೆ , "ನೋಡಿ ಸಾರ್. ಬೆಂಗಳೂರು ನಿಮಗೆ ಗೊತ್ತಿದೆ. ಯಾರು ಅಸಲಿ ಯಾರು ನಕಲಿ ಎಂದು ನೋಡಿದ ಕೂಡಲೇ ತಿಳಿಯುವುದಿಲ್ಲ. ಅದಕ್ಕೇ ಸ್ವಲ್ಪ ವಿಚಾರಿಸಬೇಕಾಯಿತು. ನೀವು ಅಷ್ಟಕ್ಕೇ ಬೇಸರಿಸಿಕೊಂಡರೆ ಹೇಗೆ? ನೀವೇ ನನ್ನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದಿರಿ?" ಎಂದೆ.

ಆತ ಕೋಪದಲ್ಲೇ, "ನಾನು ನನ್ನ ಜೀವವನ್ನೇ ಕೊಡುತ್ತಿದ್ದೆ, ನೀವು ನೋಡಿದರೆ ಜೇಬಿನಲ್ಲಿ ನೂರು ರೂಪಾಯಿಯೂ ಇಲ್ಲದವರಂತೆ ನನ್ನ ವಿಳಾಸ ಕೇಳುತ್ತಿದ್ದೀರಿ", ಎಂದ.

ನನಗೆ ಜೋರಾಗಿ ನಗು ಬಂತು. ಜೀವ ಅಷ್ಟು ಅಗ್ಗವಾಯಿತೇ? ಇವನರ್ಥದಲ್ಲಿ ಸಹಾಯವೆಂದರೆ ನಾನೀಗ ತಕ್ಷಣಕ್ಕೆ ಕೊಡಬಹುದಾದ ಇನ್ನೂರೋ ಮುನ್ನೂರೋ ಹಣವೇ ಹೊರತು ತನ್ನ ವಿಳಾಸ ಕೊಟ್ಟು ಕಷ್ಟ ಬಗೆಹರಿಸಿಕೊಳ್ಳುವುದು ಅವನಿಗೆ ಬೇಕಿಲ್ಲ.

ನಾನು ನಗುತ್ತ, "ನಾನೇನೂ ಜೀವ ಗೀವ ಕೊಡುವುದಿಲ್ಲ. ನೀವು ಬಯಸಿದರೆ ನಿಮಗೆ ಸಹಾಯ ಮಾಡಬಲ್ಲೆ", ಎಂದು ಪೇಪರನ್ನು ಮತ್ತೆ ಅವನ ಮುಂದೆ ಹಿಡಿದೆ.

ಆತ, "ಏನೂ ಬೇಕಿಲ್ಲ" ಎಂದ.

ನಾನು, "ಸರಿ, ನಿಮ್ಮಿಷ್ಟ" ಎಂದು ಬಾಗಿಲೆಳೆದುಕೊಂಡೆ. ಆತ ಮತ್ತೆ ಶಾಪ ಹಾಕಿದ್ದು ಕೇಳಿಸಿತು.

ಈ ಬಾರಿ ಅವನ ಶಾಪ ಕೇಳಿ ನನಗೆ ಏನೂ ಅನಿಸಲಿಲ್ಲ. ಎಂತೆಂಥ ಪಾಪಿಗಳನ್ನೇ ದೇವರು ತನ್ನ  ಭಕ್ತರಿಗಿಂತಲೂ ಹೆಚ್ಚು ಸುಖವಾಗಿಟ್ಟಿರುವಾಗ, ನನ್ನಂತ ಒಬ್ಬ ಎಡಬಿಡಂಗಿಯ ಮೇಲೆ, ನಾನು ಇಷ್ಟು ಮಾಡಿದ ಮೇಲೂ ಸಿಟ್ಟಾದಾನೇ? ಬಿಡಿ, ಆದದ್ದಾಗುತ್ತದೆ.

14 comments:

Karthik Kamanna said...

ಸಹಾಯ ಪಡೆದುಕೊಳ್ಳುವುದಕ್ಕೂ ಬರೆಸಿಕೊಂಡು ಬಂದಿರಬೇಕು ಬಿಡಿ.. ನಿಮ್ಮ ಕಡೆಯಿಂದ ನಿಸ್ಸ್ವಾರ್ಥವಾದುದ್ದನ್ನೇ ಮಾಡಿದ್ದೀರಿ! ಒಳ್ಳೆಯ ಗುಣ.. ನಿಮ್ಮ ವಾಹನವನ್ನ ಹಿಂದಕ್ಕೆ ತಿರುಗಿಸಿ ಆ ವ್ಯಕ್ತಿಯ ಬಳಿಗೆ ಹೋಗಿ ನೀವೇ ಖುದ್ದಾಗಿ ಕೇಳಿದ್ದಾಗ್ಯೂ ಆತ ಒಪ್ಪದಿದ್ದರೆ ನೀವೇನು ಮಾಡಲಾಗುವುದು ಹೇಳಿ? ಅದರೂ ಒಳ್ಳೆಯ ಫಜೀತಿ! :)

Subrahmanya said...

ಭದ್ರಾವತಿಗೆ ಹೋಗೋಕೆ ದುಡ್ಡಿಲ್ಲ ಅಂತ ಹೇಳಿ ನನ್ನತ್ತ್ರ ಹಣ ಕಿತ್ತು ಅಡ್ರೆಸ್ಸೂ ತಗೊಂಡು ವ್ಯಕ್ತಿಯೊಬ್ಬ ನಾಪತ್ತೆಯಾದ ಅನುಭವ ನನಗೂ ಇದೆ..! ೧೦ ರೂ ನಿಂದ ೧೦೦ ರೂ ಗೆ ಬಂದು ನಿಂತಿದೆ ಅಂತೀರಾ ಕಾಲ..?! ಕೊನೆಯಲ್ಲಿ ಹೇಳಿದ್ದೀರಲ್ಲಾ..ಪಾಪಿಗಳ ಬಗ್ಗೆ..ತುಂಬಾ ಪ್ರಸ್ತುತ..ನೀವು ತೋರಿದ ಕಾಳಜಿ ಸಮಾಜಮುಖಿಯಾದದ್ದು.."ದೇರ್ ಆಯಾ ದುರಸ್ತ್ ಆಯಾ" ಅನ್ನೋಹಾಗೇ ಸ್ವಾನುಭವದೊಡನೆ ಬಂದಿರಲ್ಲ..!

ಸಾಗರದಾಚೆಯ ಇಂಚರ said...

ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಗೊತ್ತಾಗೊಲ್ಲ
ನೀವು ನಿಮ್ಮ ಕೈಲಾದ ಸಹಾಯ ಮಾಡಲು ಯತ್ನಿಸಿದ್ದಿರಿ
ಅವನು ಮೊಸಗಾರನೇ ಇರಬೇಕು
ಇಲ್ಲದಿರೆ ವಿಳಾಸ ಕೊಡಲು ಅವನಿಗೇಕೆ ಭಯ

Ittigecement said...

ಸುಪ್ತವರ್ಣ...

"ಅಪಾತ್ರ ದಾನ" ಕೊಡ ಬಾರದಂತೆ..

ದಾನವನ್ನು..
ಸಹಾಯವನ್ನು
ಯೋಗ್ಯನಾದ ವ್ಯಕ್ತಿಗೆ ಮಾಡ ಬೇಕಂತೆ..
ಇದು ಶುಭಾಷಿತದಲ್ಲಿದೆ..

ಉದರ ನಿಮಿತ್ತಮ್ ಬಹುಕೃತ ವೇಷಮ್ !!

ಹಾಗಾಗಿ ಕೇಳುವವನ ಬಗೆಗೆ ಸಂಶಯ ಬರುವದು ಸಹಜ...

ನಿಮ್ಮ ಅನುಭವ ಚೆನ್ನಾಗಿದೆ...

V.R.BHAT said...

ನಮ್ಮ ಆತುರದ ಜೀವನದಲ್ಲಿ ಅಪಾತ್ರರ್ಯಾರು ಸಪಾತ್ರರ್ಯಾರು ಎಂದು ಹುಡುಕುವುದೇ ಕಷ್ಟವಾಗಿದೆ, ಶನಿಮಹಾತ್ಮನ ದೇವಸ್ಥಾನದಲ್ಲಿ ಅನ್ನದಾನ ಅಂತ ದುಡ್ಡು ಕಿತ್ತರು, ದೇವಸ್ಥಾನವೂ ಇಲ್ಲ-ಕಿತ್ತವ್ರು ಮೊದ್ಲೇ ಕಂಬಿಕಿತ್ತರು! ಚೆನ್ನಾಗಿದೆ!

ಚುಕ್ಕಿಚಿತ್ತಾರ said...

ಈ ರೀತಿಯ ಎಮೋಶನಲ್ ಬ್ಲಾಕ್ ಮೈಲ್ ಮಾಡುವವರಲ್ಲಿ ವೈವಿಧ್ಯತೆಗಳಿರುತ್ತವೆ...!
ನನ್ನವರೂ ಈ ರೀತಿಯ ಕೆಲವು ಪ್ರಸ೦ಗ ಎದುರಿಸಿದ ಕಥೆ ಹೇಳುತ್ತಾರೆ...
ಯಾವುದಕ್ಕೂ ದುಡ್ಡು ಕೊಡುವವರು ನಾವಾದ್ದರಿ೦ದ ವಿಚಾರಿಸುವುದು ನಮ್ಮ ಹಕ್ಕು.

ದಿನಕರ ಮೊಗೇರ said...

ದುಡ್ಡು ಗಿಡದಿಂದ ಬರಲ್ಲ ಆಲ್ವಾ .... ನಾವೂ ಸಹ ಕಷ್ಟಪಟ್ಟೆ ದುಡಿದಿರುತ್ತೇವೆ ..... ನಾವು ದುಡಿದ ಹಣ , ಯಾರಿಗೆ , ಎಲ್ಲಿಗೆ , ಯಾಕಾಗಿ ಹೋಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನಮಗಿದೆ ..... ಸಹಾಯ ಮಾಡೋದು ಒಳ್ಳೇದು ನಿಜ ಆದರೆ ಅವರವರ ವಿವೇಚನೆಗೆ ಬಿಟ್ಟಿದ್ದು ..... ಸಹಾಯ ಪಡೆಯೋಕೆ ಒತ್ತಾಯ ಮಾಡೋ ಹಾಗಿಲ್ಲ ..... ನಿಷ್ಠೆಯಿಂದ , ಒಳ್ಳೆಯ ಮನಸ್ಸಿಂದ ಸಹಾಯ ಮಾಡಲು ಹೋದಿರಿ .... ಅಷ್ಟೇ ಸಾಕು .....

ಗೌತಮ್ ಹೆಗಡೆ said...

bahala dina aadmele blog kade bandiddeeri:):)

sunaath said...

ಯಾರು ಎಂಥವರು ಎಂದು ತಿಳಿದುಕೊಳ್ಳೋದು ಕಷ್ಟ. ಸಹಾಯ ಮಾಡಿದ ಮೇಲೆ ಬಕರಾ ಆದೆ ಅಂತ ಗೊತ್ತಾದರೆ, ಬೇಜಾರಾಗುತ್ತೆ.

kalsakri said...

ನಾನೂ ಈ ತರಹ ಮೋಸ ಹೋಗಿದ್ದೀನಿ.

ಇನ್ನೊಂದು ಸಲ ಯಾರೋ ನಮ್ಮ ಆಫೀಸಿಗೆ ತಿರುಪತಿಗೋ, ಇನ್ನೆಲ್ಲಿಗೋ ಯಾತ್ರೆ ಹೋಗುತ್ತಾ ಇದ್ದೀವಿ . ಸಹಾಯ ಮಾಡಿ ಅಂತ ಬಂದಿದ್ರು. ನಮ್ಮ ಅನುಭವಿ ಮ್ಯಾನೇಜರ್ ’ ಒಂದ್ ಕೆಲ್ಸ ಮಾಡ್ರಿ, ನಮ್ಮ ಆಫೀಸ್ ಕಂಪೌಂಡ್ ಕಸ ತೆಗೆದು ಕಳೆ ಕಿತ್ತಿ. ಸ್ವಲ್ಪ ಹೆಚ್ಚೇ ಹಣ ಕೋಡಿಸ್ತೇನೆ’ ಅಂದ್ರು . ಆಸಾಮಿ ಪರಾರಿ.

ವಿ.ರಾ.ಹೆ. said...

ನಿಮ್ಮ ಅನುಭವದ ಘಟನೆ ನಮಗೂ ಒಳ್ಳೇ ಪಾಠ. ಈ ಸಿಟಿಗಳಲ್ಲ್ಲಂತೂ ಇಂತವರು ಬಹಳ. ನಾವು ಸಹಾಯ ಅಂತ ಮಾಡಿದರೆ ಅದು ಸರಿಯಾದ ರೀತಿ ತಲುಪಬೇಕಾದ ಕಡೆ ತಲುಪಬೇಕಾದವರನ್ನು ತಲುಪುತ್ತದಾ ಎಂಬುದನ್ನು ನೋಡುವುದೂ ಮುಖ್ಯ.

ಮನದಾಳದಿಂದ............ said...

ನೀವು ನಿಮ್ಮ ಜಾಗದಲ್ಲಿ ಸರಿಯಾದ ಕೆಲಸವನ್ನೇ ಮಾಡಿದ್ದೀರಾ. ಯಾವುದಕ್ಕೂ ನಿಮ್ಮ ಸಹಾಯ ಪಡೆದುಕೊಳ್ಳಲು ಅತ ಅದೃಷ್ಟ ಮಾಡಿಲ್ಲ ಬಿಡಿ. ಯಾವ ಹೊತ್ತದಲ್ಲಿ ಯಾವ ಹಾವೋ ಬಲ್ಲವರಾರು?

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

ಸೀತಾರಾಮ. ಕೆ. / SITARAM.K said...

ತಮ್ಮ ಪರೀಕ್ಷಾಗುಣ ನನಗೆ ಮಾರ್ಗದರ್ಶನ ನೀಡಿದೆ. ಚೆ೦ದದ ಲೇಖನ. ತಮ್ಮ ಮಾನವೀಯ ಕಾಳಜಿಯೂ ಜೊತೆಗಿನ ಎಚ್ಚರಿಕೆಯ ಹೆಜ್ಜೆಯೂ ತು೦ಬಾ ಪ್ರಸ್ತುತ ಮುಖ್ಯವಾಗಿ ನನ್ನ೦ತಹವರಿಗೆ. ಈ ರೀತಿ ನಾನು ಹತ್ತು ಹಲವಾರು ಸಲ ಟೋಪಿ ಹಾಕಿಸಿಕೊ೦ಡಿದ್ದೆನೆ. ಇನ್ನು ಮು೦ದೆ ಹುಷಾರಿರಬೇಕು ಎ೦ದು ಸ೦ಕಲ್ಪ ಪ್ರತಿಸಲ ಮಾಡಿದ್ದೆನೆ. ಆದರೇ ಯಾರೋ ಬ೦ದು ಮು೦ದೆ ನಿ೦ತು ಕಷ್ಟ ಹೇಳಿ ಅ೦ಗಾಲಾಚಿದರೆ ದರಿದ್ರ ಬುಧ್ಧಿಗೆ ಎಲ್ಲಾ ಮರೆತೋಗಿ ನಾಮ ಹಾಕಿಸಿಕೊಳ್ತೆನೆ. ಅಡ್ರೆಸ್ -ಫೋನ್ ನ೦ಬರ್ ತೆಗೆದುಕೊ೦ಡು ಸರಿಯಾಗಿ ಪರೀಕ್ಷಿಸದೇ ಟೋಪಿ ಹಾಕಿಸಿಕೊ೦ಡ ಪ್ರಕರಣವೊ೦ದನ್ನು ಬ್ಲೊಗ್-ನಲ್ಲಿ ಹಾಕಿದ್ದೆನೆ -"ಕೊಟ್ಟವನು ಕೋಡ೦ಗಿ" ಅನ್ನೋ ಹೆಸರಲ್ಲಿ. ಓದಿ ಅಭಿಪ್ರಾಯ ತಿಳಿಸಿ ಕೊ೦ಡಿ : http://nannachutukuhanigavanagalu.blogspot.com/2009/10/blog-post.html